
ಕಾರ್ಕಳ: ವಿಮಾನಯಾನ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಹೆಮ್ಮೆಯ ಹೆಸರಾಗಿ ಕೌಡೂರಿನ ಶೈನಿ ಅಸ್ಮಾ ಸಲ್ಡಾನಾ ಹೊರಹೊಮ್ಮಿದ್ದಾರೆ. ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ‘ಕಮರ್ಷಿಯಲ್ ಪೈಲಟ್ ಲೈಸೆನ್ಸ್’ (CPL) ಪಡೆದುಕೊಳ್ಳುವ ಮೂಲಕ, ಉಡುಪಿ ಜಿಲ್ಲೆಯಿಂದ ಈ ಸಾಧನೆಗೈದ ಪ್ರಥಮ ಮಹಿಳೆ ಎಂಬ ಐತಿಹಾಸಿಕ ಹೆಗ್ಗಳಿಗೆ ಇವರು ಪಾತ್ರರಾಗಿದ್ದಾರೆ.
ಕಾರ್ಕಳ ತಾಲೂಕಿನ ರಂಗನಪಲ್ಕೆ, ಕೌಡೂರಿನ ಅಶೋಕ್ ಜಾಕೋಬ್ ಸಲ್ಡಾನಾ ಮತ್ತು ಮರಿಯಾ ಗ್ರೆಟ್ಟಾ ಸಲ್ಡಾನಾ ದಂಪತಿಯ ಪುತ್ರಿಯಾಗಿರುವ ಶೈನಿ, ತಮ್ಮ ಶಾಲಾ ಹಾಗೂ ಪದವಿಪೂರ್ವ ಶಿಕ್ಷಣವನ್ನು ಕಾರ್ಕಳದ ಕ್ರೈಸ್ಟ್ ಕಿಂಗ್ ಎಜ್ಯುಕೇಷನಲ್ ಇನ್‌ಸ್ಟಿಟ್ಯೂಷನ್‌ನಲ್ಲಿ ಪೂರ್ಣಗೊಳಿಸಿದರು. ಬಾಲ್ಯದಿಂದಲೂ ವಿಮಾನಯಾನದ ಬಗ್ಗೆ ಆಸಕ್ತಿ ಹೊಂದಿದ್ದ ಇವರು, ಪೈಲಟ್ ಆಗಬೇಕೆಂಬ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ದೃಢ ನಿರ್ಧಾರ ಮಾಡಿದ್ದರು.
ತಮ್ಮ ಗುರಿಯನ್ನು ಸಾಧಿಸಲು ಬೆಂಗಳೂರಿನಲ್ಲಿ ನಡೆದ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ (IGRUA) ಪ್ರವೇಶ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ತೇರ್ಗಡೆ ಹೊಂದಿದರು. ತದನಂತರ, ಉತ್ತರ ಪ್ರದೇಶದ ಫುರ್ಸತ್‌ಗಂಜ್‌ನಲ್ಲಿರುವ ಪ್ರತಿಷ್ಠಿತ ಐಜಿಆರ್‌ಯುಎ ಸಂಸ್ಥೆಯಲ್ಲಿ 2023ರ ಆಗಸ್ಟ್‌ನಿಂದ ವೃತ್ತಿಪರ ಪೈಲಟ್ ತರಬೇತಿಯನ್ನು ಪಡೆದಿದ್ದಾರೆ.
ತರಬೇತಿಯ ವಿವಿಧ ಹಂತಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದಿರುವ ಶೈನಿ, ವಿಮಾನಯಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಬಯಸುವ ಉಡುಪಿ ಜಿಲ್ಲೆಯ ಯುವತಿಯರಿಗೆ ಪ್ರಮುಖ ಸ್ಪೂರ್ತಿಯಾಗಿದ್ದಾರೆ. ಮಹಿಳೆಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿರುವ ಈ ವಲಯದಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಶೈನಿಯವರಿಗೆ ಕುಟುಂಬ ವರ್ಗದವರು, ಸ್ನೇಹಿತರು ಹಾಗೂ ಕಾರ್ಕಳದ ಸ್ಥಳೀಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


