
ಸತತ ಭಾರಿ ಮಳೆಯಿಂದಾಗಿ ಮುಂಬೈನ ಕುರ್ಲಾ-ಘಾಟ್ಕೋಪರ್ ಗಡಿಯ ಚಿರಾಗ್ ನಗರದ ಗೌಸಿಯಾ ಚಾಲ್‌ನಲ್ಲಿ ಬುಧವಾರ (ಆ.12) ಮುಂಜಾನೆ 3:48ರ ಸುಮಾರಿಗೆ ಬೆಟ್ಟದ ಒಂದು ಭಾಗ ಕುಸಿದು 2-3 ಮನೆಗಳ ಮೇಲೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 4 ರಿಂದ 5 ಜನರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ.
ಈ ದುರಂತದಲ್ಲಿ ಗಾಯಗೊಂಡಿರುವ ಸೊಹೇಲ್ ಅನ್ಸಾರಿ (18) ಮತ್ತು ಮೊಹಮ್ಮದ್ ಅನ್ಸಾರಿ (14) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಮುಂಬೈ ಅಗ್ನಿಶಾಮಕ ದಳ, ಪೊಲೀಸ್, ಬಿಎಂಸಿ ಮತ್ತು ಎನ್‌ಡಿಆರ್‌ಎಫ್ ಪಡೆಗಳು ಸ್ಥಳಕ್ಕೆ ದೌಡಾಯಿಸಿ ಅತ್ಯಾಧುನಿಕ ಉಪಕರಣಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಭರದಿಂದ ನಡೆಸುತ್ತಿವೆ.
ಡಿಸಿಪಿ ಗಣೇಶ್ ಶಿಂಧೆ, ಮೇಯರ್ ರಿತು ತಾವಡೆ ಹಾಗೂ ಬಿಎಂಸಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇದರ ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಬಾಧಿತ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ.


