ಬಂಟ್ವಾಳ: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ವಿಶೇಷ ತನಿಖಾ ತಂಡ ರಚಿಸಿರುವುದನ್ನು ಆರ್ಎಸ್ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಸ್ವಾಗತಿಸಿದ್ದಾರೆ. ಆದರೆ, SITಯಲ್ಲಿರುವ ಕೆಲವು ಅಧಿಕಾರಿಗಳ ಬಗ್ಗೆ ಜನರಲ್ಲಿ ಇನ್ನೂ ಸಣ್ಣ ಮಟ್ಟಿನ ಸಂಶಯವಿದೆ ಎಂದು ಅವರು ಹೇಳಿದ್ದಾರೆ.
ಬಂಟ್ವಾಳದಲ್ಲಿ ಬಜರಂಗದಳ ಹಾಗೂ ವಿಹಿಂಪ ಆಯೋಜಿಸಿದ್ದ ‘ಬಿಸಿರೋಡ್ ಚಲೋ’ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, SIT ರಚನೆಯಾಗಿರುವುದು ಉತ್ತಮ ಬೆಳವಣಿಗೆ. ಆದರೆ, ತಂಡದಲ್ಲಿರುವ ಎಲ್ಲ ಅಧಿಕಾರಿಗಳ ಬಗ್ಗೆ ಸಂಪೂರ್ಣ ವಿಶ್ವಾಸ ಮೂಡಿಲ್ಲ ಎಂದು ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಕಾರ್ಯವೈಖರಿ ಬಗ್ಗೆ ವಿಶ್ವಾಸವಿದ್ದು, ಅವರು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ಕಾರ್ಯನಿರ್ವಹಿಸಲಿದ್ದಾರೆ ಎಂಬ ನಂಬಿಕೆ ಇದೆ. ಆದರೆ, ಇತರ ಕೆಲವು ಅಧಿಕಾರಿಗಳ ಬಗ್ಗೆ ಸಂಶಯವಿದೆ ಎಂದು ಅವರು ಹೇಳಿದ್ದಾರೆ.
SIT ಅಧಿಕಾರಿಗಳು ಯಾವುದೇ ಒತ್ತಡ, ಪ್ರಭಾವಕ್ಕೆ ಒಳಗಾಗದೆ ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಒತ್ತಾಯಿಸಿದ್ದಾರೆ.


