
ಮಂಗಳೂರು ; ವಿಶ್ವಸಂಸ್ಥೆಯ ಮುಂದಿನ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಭಾಗವಾಗಿ, 2026ರ ಜುಲೈ 23ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ‘ಯುಎನ್ ಸಿವಿಲ್ ಸೊಸೈಟಿ ಟೌನ್‌ಹಾಲ್’ (UN Civil Society Town Hall) ಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಲ್ಪಟ್ಟ ವಿವಿಧ ದೇಶಗಳ ಮಾನ್ಯತೆ ಪಡೆದ ನಾಗರಿಕ ಸಮಾಜದ ಸಂಸ್ಥೆಗಳ ಪೈಕಿ ನಗರದ ಆ್ಯಂಟಿ ಪೊಲ್ಯೂಷನ್ ಡ್ರೈವ್ ಫೌಂಡೇಶನ್ (ಎಪಿಡಿ ಪ್ರತಿಷ್ಠಾನ) ಕೂಡ ಸೇರಿತ್ತು.
ಹೊಸ ಪ್ರಧಾನ ಕಾರ್ಯದರ್ಶಿಯ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ‘ಟೌನ್‌ಹಾಲ್’ ಕಾರ್ಯಕ್ರಮವು ಮಾನ್ಯತೆ ಪಡೆದ ನಾಗರಿಕ ಸಮಾಜದ ಸಂಘಟನೆಗಳಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಕಲ್ಪಿಸುತ್ತದೆ. ಈ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳು ಸಂಸ್ಥೆಯ ಕುರಿತಾದ ತಮ್ಮ ಆದ್ಯತೆಗಳನ್ನು ವಿವರಿಸುವುದರ ಜೊತೆಗೆ ಭಾಗವಹಿಸಿದ ಸಂಘಟನೆಗಳು ಮುಂಗಡವಾಗಿ ಸಲ್ಲಿಸಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಪ್ರಸ್ತುತ ಟೌನ್‌ಹಾಲ್‌ನಲ್ಲಿ ಅಭ್ಯರ್ಥಿಗಳಾದ ಚಿಲಿಯ ಮಿಚೆಲ್ ಬ್ಯಾಚೆಲೆಟ್, ಈಕ್ವೆಡಾರ್‌ನ ಮರಿಯಾ ಫೆರ್ನಾಂಡಾ ಎಸ್ಪಿನೋಸಾ, ಅರ್ಜೆಂಟೀನಾದ ರಾಫೆಲ್ ಗ್ರೋಸ್ಸಿ, ಕೋಸ್ಟಾರಿಕಾದ ರೆಬೆಕಾ ಗ್ರಿನ್ಸ್‌ಪಾನ್, ಗಯಾನಾದ ಕ್ಯಾರೊಲಿನ್ ರೋಡ್ರಿಗಸ್ ಬಿರ್ಕೆಟ್ ಹಾಗೂ ಸೆನೆಗಲ್‌ನ ಮ್ಯಾಕಿ ಸಾಲ್ ಅವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಎಪಿಡಿ ಪ್ರತಿಷ್ಠಾನವನ್ನು ಅದರ ಸಂಸ್ಥಾಪಕ ಮತ್ತು ಸಿಇಒ ಅಬ್ದುಲ್ಲಾ ಎ. ರೆಹಮಾನ್ ಪ್ರತಿನಿಧಿಸಿದರು. ಭಾರತದಿಂದ ಭಾಗವಹಿಸಿದ ಕೆಲವೇ ನಾಗರಿಕ ಸಮಾಜದ ಸಂಸ್ಥೆಗಳ ಪೈಕಿ ಎಪಿಡಿ ಪ್ರತಿಷ್ಠಾನವೂ ಒಂದಾಗಿತ್ತು.
ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿದ ಅಬ್ದುಲ್ಲಾ ರೆಹಮಾನ್, ಅಂತರರಾಷ್ಟ್ರೀಯ ಸಮುದಾಯ ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳನ್ನು ಪರಿಹರಿಸುವಲ್ಲಿ ನಾಗರಿಕ ಸಮಾಜದ ಸಂಘಟನೆಗಳು ವಹಿಸಬಹುದಾದ ಪಾತ್ರದ ಕುರಿತು ಈ ಚರ್ಚೆಗಳು ಉತ್ತಮ ಅರಿವನ್ನು ಮೂಡಿಸಿದವು ಎಂದು ಹೇಳಿದರು.

2012ರಲ್ಲಿ ಸ್ಥಾಪನೆಯಾದ ಎಪಿಡಿ ಪ್ರತಿಷ್ಠಾನವು ಕರಾವಳಿ ಕರ್ನಾಟಕ, ಬೆಂಗಳೂರು ಹಾಗೂ ತಮಿಳುನಾಡಿನ ಆಯ್ದ ಭಾಗಗಳಲ್ಲಿ ವಾಯು ಗುಣಮಟ್ಟ, ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ, ಸುಸ್ಥಿರ ಸಂಚಾರ ಮತ್ತು ಪರಿಸರ ಜಾಗೃತಿ ಕುರಿತ ಕಾರ್ಯಕ್ರಮಗಳ ಮೂಲಕ ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸಂಪರ್ಕಿಸಿ:
ಎಪಿಡಿ ಪ್ರತಿಷ್ಠಾನ
ದೂರವಾಣಿ: 9740000008 (ಅಬ್ದುಲ್ಲಾ ಎ. ರೆಹಮಾನ್)
ಇಮೇಲ್: [email protected]
ಜಾಲತಾಣ: www.antipollution.org


