
ಕಾಸರಗೋಡು ; ಕಳೆದ 18 ವರ್ಷಗಳಿಂದ ಕಾಸರಗೋಡು-ಸುಳ್ಯ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತಾತ್ಕಾಲಿಕ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಸರಗೋಡಿನ ಮುಳಿಯಾರ್‌ನಲ್ಲಿ ನಡೆದಿದೆ. ಮುಳಿಯಾರ್‌ನ ಮಜಕ್ಕಾರ್ ನಿವಾಸಿ ಯೋಗೀಶ್ ಎಂ. (41)ಮೃತರು.
ಸೋಮವಾರ ಬೆಳಿಗ್ಗೆ ಕರ್ತವ್ಯ ಮುಗಿಸಿ ಮನೆಗೆ ಮರಳಿದ್ದ ಯೋಗೀಶ್, ತಾಯಿ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ತಮ್ಮ ಹೊಸ ಮನೆಯ ಹಿಂಭಾಗದ ಶೆಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಧ್ಯಾಹ್ನ ತಾಯಿ ಹಿಂತಿರುಗಿದಾಗ ಈ ದುರಂತ ಬೆಳಕಿಗೆ ಬಂದಿದೆ. ತಾತ್ಕಾಲಿಕ ಕೆಲಸ ಕಳೆದುಕೊಳ್ಳುವ ಭೀತಿಯಿಂದ ಯೋಗೀಶ್ ತೀವ್ರ ಮಾನಸಿಕ ಅಸ್ವಸ್ಥತೆ ಹಾಗೂ ಒತ್ತಡಕ್ಕೆ ಒಳಗಾಗಿದ್ದರು ಎಂದು ಸಂಬಂಧಿಕರು ಹಾಗೂ ಸ್ಥಳೀಯರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಧೂರ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕೆ.ಎಂ. ಕರುಣಾಕರನ್ ನೇತೃತ್ವದಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


