
ಉಡುಪಿ: ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಖಾಸಗಿ ಬಸ್ಗಳಿಗೆ ಫೋಲ್ಡಿಂಗ್ ಬಾಗಿಲುಗಳನ್ನು ಅಳವಡಿಸಲು ಜಿಲ್ಲಾಡಳಿತ ನೀಡಿದ್ದ ಜೂನ್ 1ರ ಅಂತಿಮ ಗಡುವು ಮುಗಿದು ತಿಂಗಳಾದರೂ ನಿಯಮ ಪಾಲಿಸದ ಬಸ್ಗಳ ವಿರುದ್ಧ ಉಡುಪಿ ಪೊಲೀಸರು ಕಠಿಣ ಕಾರ್ಯಾಚರಣೆ ನಡೆಸಿದ್ದಾರೆ.
ನಗರ ಬಸ್ ನಿಲ್ದಾಣದಲ್ಲಿ ಅಕಸ್ಮಿಕ ಪರಿಶೀಲನೆ ನಡೆಸಿದ ಅಧಿಕಾರಿಗಳು, ಫೋಲ್ಡಿಂಗ್ ಬಾಗಿಲಿಲದೇ ಸಂಚರಿಸುತ್ತಿದ್ದ ಸುಮಾರು 15 ಖಾಸಗಿ ಬಸ್ಗಳನ್ನು ಪತ್ತೆಹಚ್ಚಿ ಮೋಟಾರು ವಾಹನ ಕಾಯ್ದೆಯಡಿ ದಂಡ ವಿಧಿಸಿದ್ದಾರೆ. ಗಡುವು ಮೀರಿದರೂ ನಿಯಮ ಉಲ್ಲಂಘಿಸುತ್ತಿರುವ ಬಸ್ ಮಾಲೀಕರಿಗೆ ಪೊಲೀಸರು ಕೊನೆಯ ಎಚ್ಚರಿಕೆಯನ್ನು ನೀಡಿದ್ದು, ಈ ದಂಡಪ್ರಯೋಗವನ್ನು ಅಂತಿಮ ಅವಕಾಶವೆಂದು ಪರಿಗಣಿಸುವಂತೆ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಿಯಮ ಪಾಲಿಸದಿದ್ದರೆ ಕೇವಲ ದಂಡಕ್ಕೆ ಸೀಮಿತವಾಗದೆ, ಬಸ್ಗಳ ಫಿಟ್ನೆಸ್ ಪ್ರಮಾಣಪತ್ರ (FC) ರದ್ದುಗೊಳಿಸುವುದು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


