
ಕೋಲ್ಕತ್ತಾ ಸಮೀಪದ ಪಶ್ಚಿಮ ಬಂಗಾಳದ ಬೀರ್‌ಭೂಮ್‌ನಲ್ಲಿ ಅಕ್ರಮ ಮರಳು ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರಿಗೆ ನಿವೃತ್ತ ಸರ್ಕಾರಿ ಬಸ್ ಚಾಲಕನ ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿದ್ದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ತೃಣಮೂಲ ಕಾಂಗ್ರೆಸ್‌ನ (TMC) ಮಾಜಿ ನಾಯಕ ಅನುಬ್ರತ ಮಂಡಲ್ ಅವರ ಆಪ್ತನಾಗಿದ್ದ ಕಲ್ಲು ದಂಧೆಕೋರ ಟುಲ್ಲು ಮಂಡಲ್‌ನ ಉಸ್ತುವಾರಿಯಲ್ಲಿದ್ದ ಮಿನಾರ್ ಮಂಡಲ್ ಎಂಬುವರ ಮನೆ ಮೇಲೆ ದಾಳಿ ನಡೆಸಿದ ವೇಳೆ, ಬರೋಬ್ಬರಿ ₹28.5 ಕೋಟಿ ನಗದು ಹಾಗೂ ₹21 ಕೋಟಿ ಮೌಲ್ಯದ 15 ಕೆಜಿ ಚಿನ್ನ ಜಪ್ತಿ ಮಾಡಲಾಗಿದೆ.
ಬುಧವಾರ ರಾತ್ರಿ ಪ್ರಾರಂಭವಾದ ಈ ಸುದೀರ್ಘ ದಾಳಿಯ ವೇಳೆ ಪತ್ತೆಯಾದ ನೋಟುಗಳನ್ನು ಕಂಡು ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದು, ಆರಂಭದಲ್ಲಿ ₹5.5 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದ್ದ ಹಣದ ಎಣಿಕೆ ಕಾರ್ಯ ಗುರುವಾರ ಬೆಳಿಗ್ಗೆಯ ವೇಳೆಗೆ ಭಾರಿ ಮೊತ್ತವನ್ನು ತಲುಪಿತ್ತು. ಇಷ್ಟೊಂದು ಬೃಹತ್ ಪ್ರಮಾಣದ ಕಪ್ಪು ಹಣವು ಅಕ್ರಮ ಮರಳು ದಂಧೆ, ಕಲ್ಲು ಕ್ವಾರಿಗಳು ಹಾಗೂ ಜಾನುವಾರು ಸಾಗಾಣಿಕೆಯಿಂದ ಸಂಗ್ರಹವಾಗಿರಬಹುದು ಎಂದು ಶಂಕಿಸಲಾಗಿದ್ದು, ಇದರ ಮೂಲ ಮತ್ತು ಜಾಲದ ಕುರಿತು ಹಿರಿಯ ಅಧಿಕಾರಿಗಳು ತೀವ್ರ ತನಿಖೆ ಮುಂದುವರಿಸಿದ್ದಾರೆ.


