
ಮಂಗಳೂರು: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಕುಟುಂಬದ ವಿರುದ್ಧ ನೀಡಿರುವ ಹೇಳಿಕೆಗಳು ಅತ್ಯಂತ ಖಂಡನೀಯ, ಬೇಜವಾಬ್ದಾರಿಯುತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಗೇರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಮಮತಾ ಗಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ವ್ಯಕ್ತಿಯ ಘನತೆಗೆ ಧಕ್ಕೆ ತರುವುದು ಮತ್ತು ಬೆದರಿಕೆ ಅಥವಾ ಹಿಂಸೆಯನ್ನು ಸೂಚಿಸುವ ರೀತಿಯಲ್ಲಿ ಮಾತನಾಡುವುದು ರಾಜಕೀಯ ಭಿನ್ನಾಭಿಪ್ರಾಯದ ಗಡಿ ದಾಟಿ ಸಮಾಜದಲ್ಲಿ ದ್ವೇಷ ಮತ್ತು ಪ್ರಚೋದನೆಗೆ ಉತ್ತೇಜನ ನೀಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳು ಇಂತಹ ವೈಯಕ್ತಿಕ ನಿಂದನೆಗಳನ್ನು ಬಿಟ್ಟು ಜನರ ಸಮಸ್ಯೆಗಳ ಕುರಿತು ಚರ್ಚಿಸಬೇಕೆಂದು ಕಿವಿಮಾತು ಹೇಳಿದ ಅವರು, ಶಾಸಕ ಯಶ್ಪಾಲ್ ಸುವರ್ಣ ಅವರು ತಕ್ಷಣವೇ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡು ದೇಶದ ಜನರ ಕ್ಷಮೆಯಾಚಿಸಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷವು ಎಂದಿಗೂ ಸತ್ಯ, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸೌಹಾರ್ದತೆಯ ಪರವಾಗಿ ನಿಲ್ಲಲಿದ್ದು, ದ್ವೇಷ ಹಾಗೂ ಬೆದರಿಕೆಯ ರಾಜಕಾರಣವನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿಯರಾದ ವೀಣಾ, ಅಪ್ಪಿ, ಶಶಿಕಲಾ ಮತ್ತು ವೃಂದ ಪೂಜಾರಿ ಉಪಸ್ಥಿತರಿದ್ದರು.


