Thursday, July 16, 2026
Homeಕರಾವಳಿಮಂಗಳೂರುಉಪ್ಪಿನಂಗಡಿ: ಖಾಸಗಿ ಬಸ್ಸುಗಳ ಟೈಮಿಂಗ್ಸ್ ವಿಚಾರದಲ್ಲಿ ಖಾಸಗಿ ಬಸ್ ನಿರ್ವಾಹಕರ ಮಧ್ಯೆ ಮಾರಾಮಾರಿ

ಉಪ್ಪಿನಂಗಡಿ: ಖಾಸಗಿ ಬಸ್ಸುಗಳ ಟೈಮಿಂಗ್ಸ್ ವಿಚಾರದಲ್ಲಿ ಖಾಸಗಿ ಬಸ್ ನಿರ್ವಾಹಕರ ಮಧ್ಯೆ ಮಾರಾಮಾರಿ

- Advertisement -
- Advertisement -

ಉಪ್ಪಿನಂಗಡಿ: ಖಾಸಗಿ ಬಸ್ಸುಗಳ ಸಮಯದ ವಿಚಾರದಲ್ಲಿ ಉಂಟಾದ ಗಲಾಟೆ, ಹಾಡಹಗಲೇ ಪ್ರಯಾಣಿಕರ ಸಮ್ಮುಖದಲ್ಲೇ ಕಬ್ಬಿಣದ ರಾಡ್‌ನಿಂದ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ತಲುಪಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಸಾರ್ವಜನಿಕ ಶಾಂತಿ ಭಂಗ ಉಂಟುಮಾಡಿದ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಇಬ್ಬರು ಬಸ್ ನಿರ್ವಾಹಕರ ವಿರುದ್ಧ ಸ್ವಯಂಪ್ರೇರಿತ (ಸುಮೋಟೋ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಪ್ಪಿನಂಗಡಿಯಿಂದ ಮಂಗಳೂರು ಮಾರ್ಗವಾಗಿ ಸಂಚರಿಸುವ ‘ಅರಫಾ’ ಮತ್ತು ‘ಲಕ್ಷ್ಮೀ’ ಖಾಸಗಿ ಬಸ್ಸುಗಳ ನಡುವೆ ಜುಲೈ 14ರಂದು ಸಮಯದ ವಿಚಾರವಾಗಿ ತೀವ್ರ ವಾಗ್ವಾದ ನಡೆದಿತ್ತು. ಈ ಜಗಳ ವಿಕೋಪಕ್ಕೆ ತಿರುಗಿದ್ದು, ಅರಫಾ ಬಸ್ಸಿನ ನಿರ್ವಾಹಕ ನೌಶಾದ್ ಎಂಬಾತ ಕಬ್ಬಿಣದ ರಾಡ್ ಹಿಡಿದು, ಪ್ರಯಾಣಿಕರು ತುಂಬಿದ್ದ ಲಕ್ಷ್ಮೀ ಬಸ್ಸಿನೊಳಗೆ ನುಗ್ಗಿದ್ದಾನೆ. ಬಸ್ಸಿನೊಳಗಿದ್ದ ಲಕ್ಷ್ಮೀ ಬಸ್ ನಿರ್ವಾಹಕ ಖಲಂದರ್ ಯಾನೆ ಶಾಹೀದ್ ಎಂಬಾತನ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಶಾಹೀದ್ ಕೂಡ ತಿರುಗಿ ಬಿದ್ದು ನೌಶಾದ್ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದಾನೆ.

 ಬಸ್ಸಿನೊಳಗೆ ನಡೆದ ಮಾರಾಮಾರಿಯಿಂದಾಗಿ ಇಬ್ಬರೂ ನಿರ್ವಾಹಕರಿಗೂ ಗಾಯಗಳಾಗಿದ್ದು, ಇಬ್ಬರೂ ಚಿಕಿತ್ಸೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಈ ಗಲಾಟೆಗೆ ಸಂಬಂಧಿಸಿದಂತೆ ಇಬ್ಬರೂ ಪರಸ್ಪರ ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ. ಹಾಡಹಗಲೇ ಸಾರ್ವಜನಿಕರು ಹಾಗೂ ಪ್ರಯಾಣಿಕರು ಬಸ್ಸಿನಲ್ಲಿ ಕುಳಿತಿದ್ದ ಸಂದರ್ಭದಲ್ಲೇ, ಒಳನುಗ್ಗಿ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆಸಿ ಸಾರ್ವಜನಿಕರ ಶಾಂತಿಗೆ ಧಕ್ಕೆ ತಂದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಉಪ್ಪಿನಂಗಡಿ ಪೊಲೀಸರು, ಸದ್ಯ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!