
ಕಡಬ: ಹುಡುಗಿಯೊಬ್ಬಳ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೋರ್ವನನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿರುವ ಘಟನೆ ಹಾಗೂ ಇದಕ್ಕೆ ಪ್ರತಿಯಾಗಿ ನಡೆದಿರುವ ಪ್ರತಿದಾಳಿ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು-ಪ್ರತಿದೂರು ದಾಖಲಾಗಿದೆ.
ಕಡಬ ನಿವಾಸಿ ಮೋನಿಷ್ (21) ಎಂಬವರು ನೀಡಿದ ದೂರಿನಂತೆ, ಜುಲೈ 10ರಂದು ರಾತ್ರಿ ಅವರು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಕಡಬ ಗ್ರಾಮದ ಕಾಲೇಜು ರಸ್ತೆಯ ಜಂಕ್ಷನ್ ಬಳಿ ಶರತ್, ದೀಪಕ್ ಮತ್ತು ವಿಶ್ವನಾಥ ಎಂಬುವವರು ಹುಡುಗಿಯೊಬ್ಬಳ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಮೋನಿಷ್ ಅವರನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ (ಅ.ಕ್ರ): 84/2026ರಂತೆ ಬಿಎನ್ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೋನಿಷ್ ವಿರುದ್ಧವೂ ಪ್ರತಿದೂರು ದಾಖಲು;
ಇದೇ ಘಟನೆಯ ಮುಂದುವರಿದ ಭಾಗವಾಗಿ, ಕುಟ್ರುಪ್ಪಾಡಿ ನಿವಾಸಿ ದೀಪಕ್ (33) ಎಂಬುವವರು ಮತ್ತೊಂದು ಪ್ರತಿದೂರು ನೀಡಿದ್ದಾರೆ. ಮೋನಿಷ್ ಎಂಬವರು ತಮಗೆ ತಡೆದು ನಿಲ್ಲಿಸಿ, ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿರುತ್ತಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಈ ಪ್ರತಿದೂರಿನ ಅನ್ವಯ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 85/2026ರಂತೆ ಮತ್ತೊಂದು ಕೌಂಟರ್ ಪ್ರಕರಣ ದಾಖಲಾಗಿದೆ.ಮದುವೆ ವಿಚಾರಕ್ಕೆ ನಡೆದ ಈ ಗಲಾಟೆಗೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಎರಡೂ ಕಡೆಯ ದೂರುಗಳನ್ನು ದಾಖಲಿಸಿಕೊಂಡಿದ್ದು, ಘಟನೆ ಕುರಿತು ತನಿಖೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


