Saturday, July 11, 2026
Homeಕರಾವಳಿಮಂಗಳೂರು"ಬೆಳ್ತಂಗಡಿ: ಆದಿವಾಸಿಗಳಿಗೆ ಕನಿಷ್ಠ ಸೇತುವೆಯೂ ಇಲ್ಲ, ನದಿ ದಾಟದಂತೆ ಬ್ಯಾನರ್ ಹಾಕಿ ದಿಗ್ಬಂಧನ ವಿಧಿಸಿದ ಇಲಾಖೆಗಳು!"

“ಬೆಳ್ತಂಗಡಿ: ಆದಿವಾಸಿಗಳಿಗೆ ಕನಿಷ್ಠ ಸೇತುವೆಯೂ ಇಲ್ಲ, ನದಿ ದಾಟದಂತೆ ಬ್ಯಾನರ್ ಹಾಕಿ ದಿಗ್ಬಂಧನ ವಿಧಿಸಿದ ಇಲಾಖೆಗಳು!”

- Advertisement -
- Advertisement -

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲ ಎಂಬಲ್ಲಿ, ಕಳೆದ ವರ್ಷ (2025 ಜೂನ್ 15 ರಂದು) ದ್ವಿಚಕ್ರ ವಾಹನದ ಮೂಲಕ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋದ ಪ್ರದೇಶದಲ್ಲಿ ಈಗ ‘ನದಿ ತುಂಬಿ ಹರಿಯುತ್ತಿದೆ, ನದಿ ದಾಟುವುದು ನಿಷೇಧಿಸಲಾಗಿದೆ’ ಎಂಬ ಬ್ಯಾನರ್ ಹಾಕುವ ಮೂಲಕ ಮೂಲನಿವಾಸಿಗಳಿಗೆ ದಿಗ್ಬಂಧನ ವಿಧಿಸುವ ಕಾರ್ಯವನ್ನು ಇಲಾಖೆಗಳು ಮಾಡಿವೆ.

ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಎಂಬಲ್ಲಿ 9 ಆದಿವಾಸಿ ಮಲೆಕುಡಿಯ ಕುಟುಂಬಗಳು ಎರಡು ಶತಮಾನಗಳಿಂದ ವಾಸಿಸುತ್ತಿವೆ‌. ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಜೀವಿಸುತ್ತಿರುವ ಈ ಕುಟುಂಬಗಳು ವಿದ್ಯುತ್, ರಸ್ತೆ, ಸೇತುವೆ ಮುಂತಾದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಸ್ವಾತಂತ್ರ್ಯ ಲಭಿಸಿ 79 ವರ್ಷಗಳಾದರೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾದ ಆಡಳಿತ ವ್ಯವಸ್ಥೆ, ಇದೀಗ ಸಂಪರ್ಕ ಕೊಂಡಿಯಾಗಿರುವ ಇಲ್ಲಿ ನದಿಯನ್ನೇ ದಾಟಬಾರದು ಎಂದು ಬ್ಯಾನರ್ ಅಳವಡಿಸಿದೆ. ಈ ಮೂಲಕ ಆದಿವಾಸಿಗಳಿಗೆ ದಿಗ್ಬಂಧನ ವಿಧಿಸಿ, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆ ಮಾಡಿವೆ.

ಕಳೆದ ವರ್ಷ ಯುವಕರು ನದಿ ನೀರಿನ ರಭಸಕ್ಕೆ ದ್ವಿಚಕ್ರ ವಾಹನ ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ, ಅದೃಷ್ಟವಶಾತ್ ಬದುಕಿ ಬಂದಿದ್ದರು. ಆ ಸಂದರ್ಭದಲ್ಲಿ ತಾಲೂಕು ಮತ್ತು ಜಿಲ್ಲಾ ಆಡಳಿತದ ಅಧಿಕಾರಿಗಳು ಸೇರಿದಂತೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಿತ್ತಿಲಪೇಲಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ನಿವಾಸಿಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಂದೆ ತಮಗೆ ಕನಿಷ್ಠ ಸಂಪರ್ಕಕ್ಕೆ ಒಂದು ಸೇತುವೆ ನಿರ್ಮಿಸಿಕೊಡಿ ಎಂಬ ಬೇಡಿಕೆ ಇಟ್ಟಿದ್ದರು. ಅತ್ಯಂತ ಜರೂರಾಗಿ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಎಲ್ಲರೂ ಭರವಸೆ ನೀಡಿದ್ದರು. ಆದರೆ ಇಲ್ಲಿಯ ತನಕವೂ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಕೆಲಸಗಳು ನಡೆದಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೀಡಿದ ಭರವಸೆಗಳು ಇಲ್ಲಿಯ ತನಕವೂ ಈಡೇರಿಲ್ಲ.

ಇದೀಗ ಭಾರೀ ಮಳೆಯಿಂದಾಗಿ ಇಲ್ಲಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಮೂಲನಿವಾಸಿಗಳು ಈ ನದಿಯನ್ನು ದಾಟಿಯೇ ಹೊರಪ್ರಪಂಚಕ್ಕೆ ಬರಬೇಕಾಗಿದೆ. ಕೂಲಿ ಕೆಲಸಕ್ಕೆ ಹೋಗಲು ಹಾಗೂ ದಿನನಿತ್ಯದ ಅಗತ್ಯ ವಸ್ತುಗಳನ್ನು ತರಲು ಇವರಿಗೆ ಇದೊಂದೇ ದಾರಿಯಾಗಿದೆ. ಆದರೂ ಸೇತುವೆ ನಿರ್ಮಿಸಲು ಮುಂದಾಗದ ಅಧಿಕಾರಿಗಳು, ಇದೀಗ ನದಿ ದಾಟಬಾರದು ಎಂಬ ಬ್ಯಾನರ್ ಅಳವಡಿಸಿದ್ದಾರೆ.

“ಆದಿವಾಸಿ ಸಮುದಾಯವನ್ನು ಜನಪ್ರತಿನಿಧಿಗಳು ಕೇವಲ ವೋಟ್ ಬ್ಯಾಂಕ್ ಆಗಿ ದುರುಪಯೋಗ ಮಾಡಿಕೊಂಡಿದ್ದಾರೆ. ಆದಿವಾಸಿಗಳ ಯಾವುದೇ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ. ಅಧಿಕಾರಿಗಳು ನಮ್ಮ ಸಮುದಾಯಕ್ಕೆ ಸುಳ್ಳು ಭರವಸೆ ನೀಡಿ ಮೋಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಮಲೆಕುಡಿಯ ಸಮುದಾಯವನ್ನು ಗೊಂಬೆಯಾಟದಂತೆ ಬಳಸುತ್ತಿದ್ದಾರೆ. ನದಿ ದಾಟಬಾರದು ಎಂದು ಸೂಚನಾ ಫಲಕ ಹಾಕಿರುವ ಅಧಿಕಾರಿಗಳು, ಈ ಆದಿವಾಸಿ ಕುಟುಂಬಗಳು ಹೇಗೆ ಬದುಕಬೇಕು ಎಂಬುದನ್ನು ಹೇಳಬೇಕಾಗಿದೆ. ಅವರ ದಿನನಿತ್ಯದ ಅಗತ್ಯಗಳಿಗಾಗಿ ಸರಕಾರ ಯಾವ ಕ್ರಮವನ್ನೂ ಕೈಗೊಳ್ಳದೆ ಹೀಗೆ ದಿಗ್ಬಂಧನ ವಿಧಿಸುವುದು ಎಷ್ಟು ಸರಿ? ಇಂತಹ ಮೋಸದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನೇ ನಡೆಸಬೇಕಾಗುತ್ತದೆ,” ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿಯ ಪ್ರಧಾನ ಕಾರ್ಯದರ್ಶಿಯಾದ ಜಯಾನಂದ ಪಿಲಿಕಲ ಅವರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!