Friday, July 10, 2026
Homeಕರಾವಳಿಮಂಗಳೂರುಪುತ್ತೂರಿನ ಪುರುಷರಕಟ್ಟೆಯಲ್ಲಿ ಯುವತಿಗೆ ಚೂರಿ ತೋರಿಸಿ ಬೆದರಿಕೆ ಒಡ್ಡಿದ ಆರೋಪ ಪ್ರಕರಣ; ಸಂತ್ರಸ್ತ ಯುವತಿ ಮನೆಗೆ...

ಪುತ್ತೂರಿನ ಪುರುಷರಕಟ್ಟೆಯಲ್ಲಿ ಯುವತಿಗೆ ಚೂರಿ ತೋರಿಸಿ ಬೆದರಿಕೆ ಒಡ್ಡಿದ ಆರೋಪ ಪ್ರಕರಣ; ಸಂತ್ರಸ್ತ ಯುವತಿ ಮನೆಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

- Advertisement -
- Advertisement -

ಪುತ್ತೂರು: ಪುತ್ತೂರಿನ ಪುರುಷರಕಟ್ಟೆಯಲ್ಲಿ ಯುವತಿಗೆ ಚೂರಿ ತೋರಿಸಿ ಬೆದರಿಕೆ ಒಡ್ಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತ ಯುವತಿಯ ಮನೆಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ನೇತೃತ್ವದ ಉನ್ನತ ಮಟ್ಟದ ಬಿಜೆಪಿ ನಿಯೋಗ ಭೇಟಿ ನೀಡಿದೆ.

ಸಂತ್ರಸ್ತೆ ಹಾಗೂ ಆಕೆಯ ಪೋಷಕರನ್ನು ಭೇಟಿಯಾದ ನಿಯೋಗವು ಅವರಿಗೆ ಧೈರ್ಯ ತುಂಬಿತು. ಸಂತ್ರಸ್ತ ಕುಟುಂಬಕ್ಕೆ ಬಿಜೆಪಿ ಪಕ್ಷವು ನಿರಂತರವಾಗಿ ಬೆಂಬಲವಾಗಿ ನಿಲ್ಲಲಿದೆ ಎಂದು ಇದೇ ವೇಳೆ ಭರವಸೆ ನೀಡಿದ ನಿಯೋಗವು, ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರದ ಪಕ್ಷಪಾತಿ ಧೋರಣೆಯನ್ನು ಕಠಿಣ ಪದಗಳಲ್ಲಿ ಖಂಡಿಸಿದರು. “ಸಂತ್ರಸ್ತ ಯುವತಿಯು ತನ್ನ ಜೊತೆಗೆ ಚೇಷ್ಟೆ ಮಾಡಲಾಗಿದೆ ಮತ್ತು ಸಾರ್ವಜನಿಕವಾಗಿ ಚೂರಿ ತೋರಿಸಿ ಜೀವಬೆದರಿಕೆ ಒಡ್ಡಲಾಗಿದೆ ಎಂದು ಅತ್ಯಂತ ಸ್ಪಷ್ಟವಾಗಿ ದೂರಿನಲ್ಲಿ ದಾಖಲಿಸಿದ್ದಾಳೆ. ಆಕೆಯ ದೂರಿನಲ್ಲಿ ಎಲ್ಲೂ ಕೋಮುಭಾವನೆ ಕೆರಳಿಸುವ ಅಥವಾ ಪ್ರಚೋದಿಸುವ ಯಾವುದೇ ವಿಚಾರಗಳನ್ನು ಉಲ್ಲೇಖಿಸಿಲ್ಲ. ಪರಿಸ್ಥಿತಿ ಹೀಗಿದ್ದರೂ, ಸ್ವತಃ ನೊಂದ ಯುವತಿ ಹಾಗೂ ಆಕೆಗೆ ಧೈರ್ಯ ತುಂಬಿ ದೂರು ದಾಖಲಿಸಲು ಠಾಣೆಗೆ ಕರೆದೊಯ್ದ ಆಕೆಯ ಪೋಷಕರ ವಿರುದ್ಧವೇ ಪೊಲೀಸರು ಉಲ್ಟಾ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೊಲೀಸ್ ಇಲಾಖೆ ಎಸಗಿದ ಭಾರಿ ಅನ್ಯಾಯ ಮತ್ತು ದ್ರೋಹವಾಗಿದೆ” ಎಂದು ಸಂಸದರು ಗುಡುಗಿದರು.

 ಒಂದು ಹೆಣ್ಣುಮಗಳಿಗೆ ಕರಾವಳಿಯ ಮಣ್ಣಿನಲ್ಲಿ ರಕ್ಷಣೆ ಮತ್ತು ನ್ಯಾಯ ಕೊಡಲು ಸಂಪೂರ್ಣವಾಗಿ ವಿಫಲವಾಗಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಬಿಜೆಪಿ ನಿಯೋಗವು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದೆ.

- Advertisement -

Latest News

error: Content is protected !!