
ಉಡುಪಿಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತರೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ₹80,000 ನಗದು ಕಳವು ಮಾಡಿದ್ದ ಪ್ರಕರಣವನ್ನು ಕೊಲ್ಲೂರು ಪೊಲೀಸರು ಕೇವಲ 24 ಗಂಟೆಯೊಳಗೆ ಯಶಸ್ವಿಯಾಗಿ ಭೇದಿಸಿ, ಮೂವರು ಮಹಿಳಾ ಕಳ್ಳರನ್ನು ಬಂಧಿಸಿದ್ದಾರೆ.
ಜುಲೈ 5ರಂದು ನಿಮಿಶಾ ಹಾಗೂ ಅವರ ಪತಿ ಪ್ರಜೋಶ್ ದೇವಸ್ಥಾನದಲ್ಲಿ ದೇವರ ದರ್ಶನ ಮುಗಿಸಿ ಹೊರಾಂಗಣಕ್ಕೆ ಬಂದಾಗ, ಅವರ ಬ್ಯಾಗ್‌ನ ಜಿಪ್ ತೆರೆದು ₹80,000 ನಗದು ಇದ್ದ ಪರ್ಸ್ ಕಳವಾಗಿರುವುದು ಬೆಳಕಿಗೆ ಬಂದಿದೆ.
ದೇವಸ್ಥಾನದ ಸುತ್ತಮುತ್ತ ಹುಡುಕಾಟ ನಡೆಸಿದರೂ ಪರ್ಸ್ ಸಿಗದಿದ್ದಾಗ ಅವರು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಸಾರ್ವಜನಿಕರು ಸೆರೆಹಿಡಿದ ಛಾಯಾಚಿತ್ರಗಳು ಮತ್ತು ತಾಂತ್ರಿಕ ಮಾಹಿತಿಯ ನೆರವೆನಿಂದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ನೇತ್ರಾವತಿ (33), ಶಾರದಾ (50) ಮತ್ತು ದುರ್ಗಮ್ಮ (44) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಬಂಧಿತರಾದ ದುರ್ಗಮ್ಮ ವಿರುದ್ಧ ಮೈಸೂರು ಮತ್ತು ಭದ್ರಾವತಿಯಲ್ಲಿ ತಲಾ ಒಂದು ಪ್ರಕರಣ ಹಾಗೂ ಶಾರದಾ ವಿರುದ್ಧ ಬೆಂಗಳೂರು ಮತ್ತು ಮೈಸೂರಿನಲ್ಲಿ ಒಟ್ಟು ಮೂರು ಕಳ್ಳತನದ ಹಳೆಯ ಪ್ರಕರಣಗಳು ದಾಖಲಾಗಿವೆ.


