
ಉಡುಪಿ (ಜುಲೈ 04): ರಿಯಲ್ ಎಸ್ಟೇಟ್ ವ್ಯವಹಾರದ ನೆಪದಲ್ಲಿ ಉದ್ಯಮಿಯೊಬ್ಬರಿಗೆ 70 ಲಕ್ಷ ರೂಪಾಯಿ ವಂಚಿಸಿ, ಬಳಿಕ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಹೆದರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪ್ರಮುಖ ಆರೋಪಿ ಝೀನತ್ ಇಬ್ರಾಹಿಂ (ಕಂಚಿನಡ್ಕ ನಿವಾಸಿ) ಎಂಬಾಕೆಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಉಡುಪಿಯ ರಿಯಲ್ ಎಸ್ಟೇಟ್ ಉದ್ಯಮಿಯೊಂದಿಗೆ ಜಂಟಿ ಕಚೇರಿ ತೆರೆದಿದ್ದ ಝೀನತ್, ಜಮೀನು ಖರೀದಿಯ ಹೂಡಿಕೆಗಾಗಿ ಉದ್ಯಮಿಯಿಂದ 70 ಲಕ್ಷ ರೂ. ಪಡೆದು ತನ್ನ ಐಷಾರಾಮಿ ಜೀವನಕ್ಕೆ ಬಳಸಿಕೊಂಡಿದ್ದಳು. ನಷ್ಟದ ಕಾರಣ ಕಚೇರಿ ಮುಚ್ಚುವಾಗ ಅಲ್ಲಿದ್ದ ಪೆನ್ ಡ್ರೈವ್ ಪರಿಶೀಲಿಸಿದ ಉದ್ಯಮಿಗೆ, ರಾಜ್ಯದ ಹಲವು ಗಣ್ಯರ ಅಶ್ಲೀಲ ವೀಡಿಯೋಗಳು ಪತ್ತೆಯಾಗಿ ಶಾಕ್ ಆಗಿದ್ದಾರೆ. ತಾನು ನೀಡಿದ್ದ ಹಣವನ್ನು ಉದ್ಯಮಿ ವಾಪಸ್ ಕೇಳಿದಾಗ ಝೀನತ್ ಬ್ಲ್ಯಾಕ್‌ಮೇಲ್ ತಂತ್ರ ಶುರು ಮಾಡಿದ್ದಾಳೆ. ಉದ್ಯಮಿಯ ಕಚೇರಿಗೆ ನುಗ್ಗಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ, ಹಣ ನೀಡದಿದ್ದರೆ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಹಾಗೂ ಪತ್ನಿ-ಮಕ್ಕಳನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾಳೆ.
ಉದ್ಯಮಿ ನೀಡಿದ ದೂರಿನನ್ವಯ ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಉಡುಪಿ ನಗರ ಠಾಣೆಯ ಎಸ್‌ಐ ಭರತೇಶ್ ಕಂಕಣವಾಡಿ ನೇತೃತ್ವದ ವಿಶೇಷ ತಂಡ ಜುಲೈ 2ರಂದು ಆರೋಪಿತೆಯನ್ನು ಬಂಧಿಸಿದೆ. ಈ ಹನಿಟ್ರ್ಯಾಪ್ ಜಾಲದಲ್ಲಿ ಸಬೀನಾ ಇಲ್ಯಾಸ್ ಸೇರಿದಂತೆ ಇತರರು ಸಾಥ್ ನೀಡುತ್ತಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ನ್ಯಾಯಾಲಯವು ಆರೋಪಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.


