ಸುಳ್ಯ: ಮುರುಳ್ಯದ ಕಡೀರ ಎಂಬಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಆಟವಾಡುತ್ತಾ ಕೆರೆಯ ಬಳಿ ಹೋದ ಮಕ್ಕಳಿಬ್ಬರು ಸುಮಾರು 15 ಅಡಿ ಆಳದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.ಕಡೀರ ವಸಂತ ಹಾಗೂ ದಿವ್ಯ ದಂಪತಿಯ ಮಕ್ಕಳಾದ ಯಶ್ವಿನ್ ಹಾಗೂ ಜಶ್ವಿನ್ (5) ಮೃತರು. ಮಕ್ಕಳಿಬ್ಬರು ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ವಸಂತ ಅವರು ದಿನಾಂಕ: 20.06.2026 ರಂದು ಮಧ್ಯಾಹ್ನ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆತಂದಿದ್ದು, ಸಂಜೆ ವೇಳೆಗೆ ಅವರು ಹಾಗೂ ಅವರ ಪತ್ನಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು, ಮನೆಯ ಸಮೀಪದ ತೋಟದಲ್ಲಿ ಕೆಲಸ ಮಾಡಲು ತೆರಳಿದ್ದರು. ಕೆಲಸ ಮುಗಿಸಿ ಪಿರ್ಯಾದಿರವರ ಪತ್ನಿ ಮನೆಗೆ ಬಂದಾಗ ಮಕ್ಕಳು ಮನೆಯಲ್ಲಿ ಕಾಣಿಸದೇ ಇದ್ದಾಗ ವಸಂತ ಹಾಗೂ ಅವರ ಪತ್ನಿ ದಿವ್ಯ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಿದ್ದಾರೆ. ಈ ವೇಳೆ ಮಕ್ಕಳ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಮಕ್ಕಳು ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು ಮೃತಪಟ್ಟಿರಬಹುದಾಗಿ ವಸಂತ ಅವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:22/2026 ಕಲಂ:194 BNSS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.


