ಬಂಟ್ವಾಳ: ಕಾರು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಯುವಕ ಸಾವನ್ನಪ್ಪಿರುವ ಘಟನೆ ಸಜಿಪನಡು ಸಮೀಪದ ದೇರಾಜೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಮಡ್ಯಲಚ್ಚಿಲ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಅಹ್ಮದ್ ಅಸೀರ್ (22) ಮೃತ ಬೈಕ್ ಸವಾರ.
ಗುರುವಾರ ಸಂಜೆ ವೇಳೆ ಅಹ್ಮದ್ ಅಸೀರ್ ಅವರು ತಮ್ಮ ಆಕ್ಟಿವಾ ಸ್ಕೂಟರ್‌ನಲ್ಲಿ ಸಜಿಪ ಕಡೆಯಿಂದ ಬೇಂಕೆ ಕಡೆಗೆ ಸಂಚರಿಸುತ್ತಿದ್ದರು. ಈ ವೇಳೆ ದೇರಾಜೆ ತಲುಪುತ್ತಿದ್ದಂತೆ ಎದುರಿನಿಂದ ಅತಿ ವೇಗವಾಗಿ ಬಂದ ಕಾರೊಂದು ಸ್ಕೂಟರ್‌ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಭೀಕರತೆಗೆ ಅಸೀರ್ ಅವರು ರಸ್ತೆಗೆ ಎಸೆಯಲ್ಪಟ್ಟು, ಅವರ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದೆ. ಸ್ಥಳೀಯ ನಿವಾಸಿಗಳು ತಕ್ಷಣವೇ ರಕ್ತದ ಮಡುವಿನಲ್ಲಿದ್ದ ಅಸೀರ್ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಮೃತರು ತಂದೆ, ತಾಯಿ, ನಾಲ್ವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಒಳಗೊಂಡ ದೊಡ್ಡ ಕುಟುಂಬವನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


