Saturday, August 22, 2026
Homeಕರಾವಳಿಮಂಗಳೂರುಬೆಳ್ತಂಗಡಿ : ನಾಪತ್ತೆಯಾಗಿದ್ದವ 26 ವರ್ಷದ ಬಳಿಕ ಮನೆ ಸೇರಿದ ಧರ್ಮಸ್ಥಳದ ವ್ಯಕ್ತಿ; 12 ವರ್ಷದವನಾಗಿದ್ದಾಗ...

ಬೆಳ್ತಂಗಡಿ : ನಾಪತ್ತೆಯಾಗಿದ್ದವ 26 ವರ್ಷದ ಬಳಿಕ ಮನೆ ಸೇರಿದ ಧರ್ಮಸ್ಥಳದ ವ್ಯಕ್ತಿ; 12 ವರ್ಷದವನಾಗಿದ್ದಾಗ ಮನೆ ಬಿಟ್ಟ ವ್ಯಕ್ತಿ 26 ವರ್ಷದ ಬಳಿಕ ಮರಳಿ ಬಂದಿದ್ದೇ ರೋಚಕ…

- Advertisement -
- Advertisement -

ಬೆಳ್ತಂಗಡಿ : “ಒಂದು ಒಳ್ಳೆ ಸೂಚನೆ ಅಸ್ತು ಅನ್ನಿ ಸುಮ್ಮನೆ ಕಾಣ ಹೊರಟೆ ಅಮ್ಮ ಎಂಬ ವಿಸ್ಮಯನೆ…. ಉಸಿರೇ ನನ್ನುಸಿರೇ ನಿನ್ನಮ್ಮ”… ಎಂಬ ವಜ್ರಕಾಯ ಸಿನಿಮಾದ ಈ ಹಾಡಿನ ಸಾಲು ಅಚ್ಚರಿಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಮಗ ಜನ್ಮ ನೀಡಿದ ತಾಯಿಯನ್ನು 26 ವರ್ಷದ ಬಳಿಕ ಹುಡುಕಿಕೊಂಡು ಹುಟ್ಟೂರಿಗೆ ಮರಳಿ ಬಂದು, ಅಮ್ಮ ಮಗನ ಪುನರ್ ಸಮ್ಮಿಲನಕ್ಕೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಅಶೋಕನಗರ ಸಾಕ್ಷಿಯಾಗಿದೆ.

ಧರ್ಮಸ್ಥಳ ಗ್ರಾಮದ ಅಶೋಕ ನಗರದ ಶಿವಪಾರ್ವತಿ ನಿಲಯದ ಕುಂಞ ಮತ್ತು ಅಕ್ಕು ದಂಪತಿಯ ಪ್ರಥಮ ಪುತ್ರ 12 ವರುಷದ ಬಾಲಕ ಸತೀಶ್ ಎಂಬಾತ 26 ವರ್ಷಗಳ ಹಿಂದೆ ಅಂದರೆ 2000 ಇಸವಿಯ ಡಿಸೆಂಬರ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಸಮಯದಲ್ಲಿ ಸರ್ಕಸ್ ಕಂಪನಿಯೊಂದಿಗೆ ಕೆಲಸಕ್ಕೆಂದು ಹೋದಾತ ಮರಳಿ ಬಂದಿದ್ದು 2026ರ ಜೂ.9ರಂದು.  

ಕ್ಷೇತ್ರ ದರ್ಶನದೊಂದಿಗೆ ತಾಯಿಯ ದರ್ಶನ: ಮಹಾರಾಷ್ಟ್ರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮುಗಿಸಿ, ವಾಸವಿದ್ದ ರೂಂನ ಅಸುಪಾಸಿನಲ್ಲಿ ಸುತ್ತಾಡಿಕೊಂಡು ಬಂದಾತನಿಗೆ ತನ್ನ ಬಾಲ್ಯ ದಿನಗಳ ಮರುಕಳಿಸಿದವು. ತಾನು ಕಲಿತ ಎಸ್‌.ಡಿ.ಎಮ್ ಶಾಲೆ, ಆಟದ ಮೈದಾನ, ಬೆಳೆದ ಊರು ನೆನೆಪಿಗೆ ಬಂದು, ತನ್ನ ತಾಯಿಯನ್ನು ಹುಡುಕಿಕೊಂಡು ಧರ್ಮಸ್ಥಳ ಗ್ರಾಮ ಪಂಚಾಯತ್ ಕೆಳಭಾಗದಲ್ಲಿರುವ ಯತೀಶ್ ಯಕ್ಷ ಎಂಬವರ ಅಂಗಡಿಗೆ ಬಂದ ಸತೀಶ್ ನಾನು ಬಾಲ್ಯದಲ್ಲಿ ಈ ಊರಿನಲ್ಲಿ ಬೆಳೆದಿದ್ದು, ನಾನು 26 ವರ್ಷದ ಹಿಂದೆ ಊರು ಬಿಟ್ಟು ಹೋಗಿದ್ದೆ, ತನ್ನ ತಂದೆ-ತಾಯಿ, ತಮ್ಮಂದಿರ ಹೆಸರು ಹೇಳುತ್ತಿದ್ದಂತೆ ಅಂಗಡಿಯ ಮಾಲೀಕ ಯತೀಶ್ ಯಕ್ಷ ಎಂಬುವರು ಆತನ ಕುಟುಂಬದವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸರ್ಕಸ್ ಕಂಪನಿಯ ಕೆಲಸಕ್ಕೆ ಹೋಗಿ ಮಹಾರಾಷ್ಟ್ರ ಸೇರಿದ ಸತೀಶ್ :  ಲಕ್ಷ ದೀಪೋತ್ಸವ ಸಮಯ ಸರ್ಕಸ್ ಕಂಪನಿಗೆ ಅಶೋಕ ನಗರದ  4 ಮಂದಿ ಕೆಲಸಕ್ಕೆಂದು ಹೋಗಿದ್ದರು. ಸುಬ್ರಹ್ಮಣ್ಯ, ಸುಳ್ಯ, ಭದ್ರಾವತಿ ತನಕ ಕೆಲಸ ಮಾಡಿದ ಆ  ನಾಲ್ಕು ಮಂದಿಯ ತಂಡ ಸರ್ಕಸ್ ಕಂಪನಿಯೊಂದಿಗೆ ನಂತರ ಮುಂಬೈಗೆ ಹೋಗುವುದಾಗಿ ತಿಳಿಸಿದಕ್ಕೆ ಸತೀಶ್ ನಾನು ಬರುವುದಿಲ್ಲ . ನೀವು ಹೋಗಿ ಎಂದಿದಕ್ಕೆ ಉಳಿದ ಮೂರು ಮಂದಿ 2 ವರ್ಷದ ಬಳಿಕ ಊರು ಸೇರಿದರು. ಆದರೆ ಊರಿಗೆ ಬರಲ್ಲ ಎಂದ ಸತೀಶ್ ಊರು ಸೇರದೆ ಹೋಗಿದ್ದು ಮಹಾರಾಷ್ಟ್ರಕ್ಕೆ. ಮಹಾರಾಷ್ಟ್ರದಲ್ಲಿ ಮದುವೆ ಹಾಲ್ ಡೆಕೋರೇಶನ್, ಚಾಲಕ, ಹೋಟೆಲ್‌ಗಳಲ್ಲಿ ಕೆಲಸ ಹೀಗೆ ಬದುಕು ಕಟ್ಟಿಕೊಂಡ ಸತೀಶ್ ಬಳಿಕ ಸಲೀಂ ಅಬ್ದುಲ್ ಅನ್ಸಾರಿಯಾಗಿ(38) ಬದಲಾಗಿ ಹೊಸ ಜೀವನಕ್ಕೆ ಮುನ್ನಡಿ ಬರೆದ.

ಮಹಾರಾಷ್ಟ್ರದಿಂದ ಹುಟ್ಟೂರಿಗೆ:

ಮಹಾರಾಷ್ಟ್ರ ರಾಜ್ಯದ ನಾಗ್ಪುರ ಜಿಲ್ಲೆಯ ಕಲ್ಮೇಶ್ವರ ತಾಲೂಕಿನ ದಹೆಂಗಾವ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಪತ್ನಿ ತಾಲೀಮಾ ಪುತ್ರಿ ಖುಷಿ (14) ಹಾಗೂ ಪುತ್ರ ಅಝಂ(9) ಜೊತೆ ವಾಸವಿರುವ ಸತೀಶ್ ಸದ್ಯ ವಾಸವಿದ್ದರು. 2005 ರಿಂದ ದಹೆಂಗಾವ್‌ನ ಶರ್ಮ ಡಾಬಾದ ವ್ಯವಸ್ಥಾಪಕರಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ಸುಮಾರು ಮಾಸಿಕವಾಗಿ 25 ಸಾವಿರ ಸಂಪಾದನೆ ಮಾಡಿ ಬದುಕು ಕಟ್ಟಿಕೊಂಡ ಸತೀಶ್ ಯಾನೆ ಸಲೀಂ ಅನ್ಸಾರಿ ದಹೆಂಗಾವ್‌ನಿಂದ ತನ್ನ ಸಹೊದ್ಯೋಗಿ ರಮೇಶ್‌ರೊಂದಿಗೆ 1258 ಕಿಮೀ.ಕ್ರಮಿಸಿ ಧರ್ಮಸ್ಥಳಕ್ಕೆ ಬಂದವರು ಇದೀಗ ತನ್ನ ಹೆತ್ತಮ್ಮನ ಮಡಿಲು ಸೇರಿದ್ದಾರೆ.

ಹರಕ್ಕೆ ಕಟ್ಟಿಕೊಂಡಿದ್ದೆ:

ಮಗ ಮರಳಿ ಬರಲು ಹೆತ್ತವ್ವ ಅಕ್ಕು ಶ್ರೀಕ್ಷೇತ್ರ ಧರ್ಮಸ್ಥಳ, ಕಟೀಲು, ಪಣೋಲಿಬೈಲು ಕ್ಷೇತ್ರಕ್ಕೆ ಹರಕೆ ಕಟ್ಟಿಕೊಂಡಿದ್ದರು. ಇತ್ತೀಚೇಗೆ ತನ್ನ ಮಕ್ಕಳಾದ ಹರೀಶ್ ಮತ್ತು ನಾಗೇಶರ ಬಳಿ ನಾನು ಸಾವನ್ನಪ್ಪುವ ಮೊದಲು ನನಗೆ ನನ್ನ ಹಿರಿಮಗ ಸತೀಶನನ್ನು ನೋಡಬೇಕು ಎಂದು ಹೇಳಿದ್ದರು. ಭಕ್ತಿಯ ಪ್ರಾರ್ಥನೆಯೋ, ದೈವೀಚ್ಚೆಯೋ 26 ವರ್ಷದ ಬಳಿಕ ತಾಯಿ ಮಗ ಒಂದಾಗಿದ್ದಾರೆ.

ಮಾತೃಭಾಷೆ ತುಳು ಮರೆತು ಹೋಗಿದೆ;

ಸತೀಶ್ ಮೂರು ವರ್ಷದ ಹಿಂದೆ ತಂದೆ ಕುಂಞ ಅವರನ್ನು ಕಳೆದುಕೊಂಡಿರುವ ವಿಷಯ ಕೇಳಿ ದು:ಖತಪ್ತರಾದರು. ಬಾಲ್ಯದಲ್ಲಿ ಮಾತೃ ಭಾಷೆ ತುಳು ಅರಿತಿದ್ದ ಸತೀಶ್ ಇದೀಗ ಹಿಂದೆ ಭಾಷೆ ಮಾತ್ರ ಬಲ್ಲವರಾಗಿದ್ದಾರೆ. ತುಳು ಅವರಿಗೆ ಅರ್ಥವಾಗುತ್ತಿದ್ದು ಮಾತನಾಡಲು ಅಲ್ಪಸ್ವಲ್ಪ ಬರುತ್ತದೆ ಎನ್ನುತ್ತಾರೆ ಸತೀಶ್. ಮನೆಯವರು ಮತ್ತೆ ಸಿಕ್ಕ ಬಳಿಕ ತನ್ನ ಕುಟುಂಬವನ್ನು ಕರೆದುಕೊಂಡು ಬಂದು ಪರಿಚಯಿಸುವುದಾಗಿ ಮಾಧ್ಯಮದ ಪ್ರಶ್ನೆಗೆ ಸತೀಶ್ ಯಾನೆ ಸಲೀಂ ಅನ್ಸಾರಿ ಪ್ರತಿಕ್ರಿಯೆ ನೀಡಿದ್ದಾರೆ. ಜೂ.10 ರಂದು ತನ್ನ ಸ್ನೇಹಿತ ರಮೇಶ್ ಅವರೊಂದಿಗೆ ಸಲೀಂ ಅಬ್ದುಲ್ ಅನ್ಸಾರಿ ವಾಪಸ್ ಕರ್ಮಭೂಮಿಗೆ ಪ್ರಯಣ ಬೆಳೆಸಿದ್ದಾರೆ. 26 ವರ್ಷದ ಬಳಿಕ ಹುಟ್ಟೂರಿಗೆ ಮರಳಿ ಬಂದ ಸತೀಶ್ ಅವರನ್ನು ನೋಡಲು ತನ್ನ ಕುಟುಂಬದವರು, ಸಾಲು ಸಾಲು ಹಿತೈಷಿಗಳು ಬಂದು ಅವರನ್ನು ತಬ್ಬಿಕೊಂಡು ಆನಂದ ಭಾಷ್ಪ ಸುರಿಸಿದರು.

ಅಣ್ಣ ಮರಳಿ ಬಂದಿರುವುದು ನಮಗೆ ಸಂತೋಷವಾಗುತ್ತಿದೆ: ಮಹಾರಾಷ್ಟ್ರದಲ್ಲಿ ತನ್ನ ಬದುಕು ಕಟ್ಟಿಕೊಂಡಿದ್ದಾನೆ. ಅವನ ಕುಟುಂಬವನ್ನು ಮನೆಗೆ ಕರೆದುಕೊಂಡು ಬರುವಂತೆ ತಿಳಿಸಿದ್ದೇವೆ. ನಾವು ಅವನ ಮನೆಗೆ ಹೋಗುತ್ತೇವೆ ಅವನು ಎಲ್ಲಿದ್ದರೂ ನಮಗೆ ಖುಷಿಯೇ, ಕಡಿದು ಹೋಗಿದ್ದ ಸಂಬಂಧ ಮತ್ತೆ ಒಂದಾಗಿದೆ ಎನ್ನುತ್ತಾರೆ ಸಹೋದರ ನಾಗೇಶ್.

ಹುಟ್ಟೂರು ತ್ಯಜಿಸಿದರೂ ನನ್ನ ಕುಟುಂಬದವರ ಚಹರೆ, ಒಡನಾಟ ನೆನೆಪಿತ್ತು. ದೇವರ ದರ್ಶನಕ್ಕೆಂದು ಬಂದಾಗ ನನಗೆ ಬಾಲ್ಯದ ದಿನಗಳು ನೆನಪಾಗಿ ಅಂಗಡಿಯೊಂದರಲ್ಲಿ ವಿಚಾರಿಸಿದಾಗ ತಾಯಿ ಮತ್ತು ಕುಟುಂಬದವರು ಮತ್ತೆ ಸಿಕ್ಕಿರುವುದು ಖುಷಿ ತಂದಿದೆ. ಆಗಾಗ ಬಂದು ಹೋಗಿ ತಾಯಿಯನ್ನು ಭೇಟಿ ಮಾಡುತ್ತೇನೆ. ನನ್ನ ಕುಟುಂಬದವರನ್ನೂ ಕರೆತರುತ್ತೇನೆ ಎಂದು ಸತೀಶ್ ಯಾನೆ ಸಲೀಂ ಅಬ್ದುಲ್ ಅನ್ಸಾರಿ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!