ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಕುಖ್ಯಾತ ದರೋಡೆಕೋರನನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಮೂಲದ ಆಶಿಫ್ ಪಿ.ಎಚ್. (25) ಬಂಧಿತ ಆರೋಪಿ.
ಆಶಿಫ್ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ . ಈತನ ಬ್ಯಾಗ್ ತಪಾಸಣೆ ನಡೆಸಿದಾಗ, ಯಾವುದೇ ದಾಖಲೆಗಳಿಲ್ಲದ 93.5 ಗ್ರಾಂ ತೂಕದ ಚಿನ್ನಾಭರಣಗಳು ಪತ್ತೆಯಾಗಿವೆ. ಇದರಲ್ಲಿ 4 ಬಳೆಗಳು, 3 ಹಾರಗಳು, 4 ಉಂಗುರಗಳು, ಚೈನ್, ಬ್ರೇಸ್‌ಲೆಟ್ ಹಾಗೂ ಸ್ಟಡ್‌ಗಳಿದ್ದವು. ಅಂದಾಜು ₹13.06 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಈತ ಕೇರಳದ ತ್ರಿಶೂರ್ ಜಿಲ್ಲೆಯ ಪಾವರಟ್ಟಿ ಎಂಬಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಪಾವರಟ್ಟಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಈಗಾಗಲೇ ಪ್ರಕರಣ (Crime No. 516/2026) ದಾಖಲಾಗಿದ್ದು, ಎರ್ನಾಕುಳಂ ಮತ್ತು ಕಾಸರಗೋಡು ವ್ಯಾಪ್ತಿಯಲ್ಲಿ ನಡೆದ ಹಲವು ಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂದು ಗೊತ್ತಾಗಿದೆ. ಆರೋಪಿಯ ವಿರುದ್ಧ ಹಲವು ಬಾಕಿ ವಾರಂಟ್‌ಗಳಿದ್ದು, ಹೆಚ್ಚಿನ ತನಿಖೆಗಾಗಿ ಆತನನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.


