ಚೆನ್ನೈ: ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ.
ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಪಕ್ಷಗಳು ಟಿವಿಕೆಗೆ ಬೆಂಬಲ ಘೋಷಣೆ ಮಾಡಿವೆ.ಟಿವಿಕೆಗೆ ಬೆಂಬಲ ಘೋಷಿಸಿ ಸಿಪಿಐ ಮತ್ತು ಸಿಪಿಐ(ಎಂ) ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಕಾಂಗ್ರೆಸ್ ಈಗಾಗಲೇ ಡಿಎಂಕೆ ಜೊತೆಗಿನ ಮೈತ್ರಿ ಕಡಿದುಕೊಂಡು ಟಿವಿಕೆಗೆ ಬೆಂಬಲ ಘೋಷಣೆ ಮಾಡಿದೆ.
ಈ ಮಧ್ಯೆ ಟಿವಿಕೆಗೆ ಬೆಂಬಲ ಘೋಷಣೆ ಮಾಡಿರುವ ಎಡ ಪಕ್ಷಗಳು ಸರ್ಕಾರದಲ್ಲಿ ಭಾಗಿಯಾಗಲ್ಲ ಎಂದು ಘೋಷಣೆ ಮಾಡಿದ್ದು, ಟಿವಿಕೆಗೆ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವಂತೆ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ 5, ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ತಲಾ ಎರಡು ಸೀಟುಗಳನ್ನು ಹೊಂದಿದ್ದು, ಮುಸ್ಲಿಂ ಲೀಗ್ ಮತ್ತು ಎಎಂಎಂಕೆ ಬೆಂಬಲದೊಂದಿಗೆ ತಮಗೆ 121 ಶಾಸಕರ ಬಲ ಇದೆ ಎಂದು ಟಿವಿಕೆ ಹೇಳಿಕೊಂಡಿದೆ.
ಇದೇ ವೇಳೆ, ತಮಿಳುನಾಡಿನಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿದ್ದಕ್ಕೆ ಸಿಟ್ಟಾಗಿರುವ ಡಿಎಂಕೆ ಲೋಕಸಭೆಯಲ್ಲಿ ಇಂಡಿ ಮೈತ್ರಿಕೂಟದಿಂದ ಹೊರಬಂದು ಪ್ರತ್ಯೇಕ ಆಸನ ನೀಡುವಂತೆ ಲೋಕಸಭಾ ಸ್ಪೀಕರ್ ಗೆ ಪತ್ರ ಬರೆದಿದೆ.


