ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ 165 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಮಹಾತ್ಮ ಗಾಂಧಿ ನಗರಾಭಿವೃದ್ಧಿ ಯೋಜನೆ 2ನೇ ಹಂತದ ಯೋಜನೆಯಡಿ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ ಎಂದು ಮನಪಾ ಕಟ್ಟಡದಲ್ಲಿರುವ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಎ.18ರಂದು ಬೆಳಗ್ಗೆ 9ಕ್ಕೆ ಮರವೂರು ಸೇತುವೆ ಬಳಿ 3 ಕೋಟಿ ರೂ. ವೆಚ್ಚದ ಕಾಮಗಾರಿ, 9.45ಕ್ಕೆ ವೆಲೆನ್ಸಿಯಾ ಚರ್ಚ್ ಬಳಿ 1.95 ಕೋಟಿ ರೂ. ವೆಚ್ಚದ ಕಾಮಗಾರಿ, 10:30ಕ್ಕೆ ಚಿಲಿಂಬಿಗುಡ್ಡೆ ಬಳಿ 2 ಕೋಟಿ ರೂ. ವೆಚ್ಚ ಹಾಗೂ ಸುಂಕದಕಟ್ಟೆ ಉರ್ವಾಸ್ಟೋರ್ ಬಳಿ 10:45ಕ್ಕೆ ಪ್ರಮುಖ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸುವರು. ಬಳಿಕ ಸಭಾ ಕಾರ್ಯಕ್ರಮ ಉರ್ವಾಸ್ಟೋರ್ ನ ಅಂಬೇಡ್ಕರ್ ಭವನದಲ್ಲಿ 11ಕ್ಕೆ ನಡೆಯಲಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಶಶಿಧರ ಹೆಗ್ಡೆ, ಅಪ್ಪಿ, ಭಾಸ್ಕರ್, ಡಿ.ಕೆ.ಅಶೋಕ್, ಪ್ರೇಮ್, ಕೇಶವ, ಚೇತನ್, ಇಮ್ರಾನ್, ಸೋನ್ಸ್, ಚಂದ್ರಹಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.


