Sunday, June 7, 2026
Homeತಾಜಾ ಸುದ್ದಿಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ತಂದೆ ಮಗ ಸಾವು ಪ್ರಕರಣ; 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ...

ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ತಂದೆ ಮಗ ಸಾವು ಪ್ರಕರಣ; 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದ ಮಧುರೈ ಜಿಲ್ಲಾ ನ್ಯಾಯಾಲಯ; ಇದು ದೇಶದಲ್ಲೇ ಮೊದಲ ಪ್ರಕರಣ

- Advertisement -
- Advertisement -

ಮಧುರೈ: ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ತಂದೆ ಮಗ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿ ಬರೋಬ್ಬರಿ ಆರು ವರ್ಷಗಳ ಬಳಿಕ ಮಧುರೈ ಜಿಲ್ಲಾ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ.


ಇನ್‌ಸ್ಪೆಕ್ಟರ್ ಶ್ರೀಧರ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಬಾಲಕೃಷ್ಣನ್, ರಘು ಗಣೇಶ್ ಹಾಗೂ ಪೊಲೀಸ್ ಸಿಬ್ಬಂದಿಯಾದ ಮುರುಗನ್, ಸಮದುರೈ, ಮುತ್ತುರಾಜ, ಚೆಲ್ಲದುರೈ, ಥಾಮಸ್ ಫ್ರಾನ್ಸಿಸ್ ಮತ್ತು ವೇಲುಮುತ್ತು ಅವರಿಗೆ ಗಲ್ಲು ಶಿಕ್ಷೆಗೆ ಒಳಗಾದವರು.

ಏನಿದು ಪ್ರಕರಣ?

2020ರ ಜೂನ್ 19ರಂದು ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೊಬೈಲ್ ಅಂಗಡಿ ತೆರೆದಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ಸತಾನಕುಲಂ ಪೊಲೀಸರು ಬಂಧಿಸಿದ್ದರು. ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ರಾತ್ರಿಯಿಡೀ ಅಮಾನವೀಯವಾಗಿ ಹಲ್ಲೆ ನಡೆಸಲಾಗಿತ್ತು. ತೀವ್ರ ದೈಹಿಕ ದೌರ್ಜನ್ಯದಿಂದಾಗಿ ಗುದನಾಳದ ರಕ್ತಸ್ರಾವ ಸಂಭವಿಸಿ, ನ್ಯಾಯಾಂಗ ಬಂಧನದಲ್ಲಿದ್ದಾಗಲೇ ಇಬ್ಬರೂ ಕೆಲವೇ ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದರು.

ಮದ್ರಾಸ್ ಹೈಕೋರ್ಟ್ ನಿರ್ದೇಶನದಂತೆ ತನಿಖೆ ಕೈಗೆತ್ತಿಕೊಂಡ ಸಿಬಿಐ, ಇದು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ವಾದಿಸಿತ್ತು. ಠಾಣೆಯಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ನೀಡಿದ ಸಾಕ್ಷ್ಯವು ಪ್ರಕರಣಕ್ಕೆ ದೊಡ್ಡ ತಿರುವು ನೀಡಿತ್ತು. ಠಾಣೆಯ ಟೇಬಲ್‌ಗಳು ಮತ್ತು ಲಾಠಿಗಳ ಮೇಲೆ ರಕ್ತದ ಕಲೆಗಳಿದ್ದವು ಎಂಬುದು ತನಿಖೆಯಿಂದ ದೃಢಪಟ್ಟಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿಹಾಕುವ ಮೂಲಕ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರೂ, 100ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿ ಸಿಬಿಐ ಆರೋಪ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ.

ಆರು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಸಿಕ್ಕಿರುವ ಈ ತೀರ್ಪು, ಪೊಲೀಸ್ ದೌರ್ಜನ್ಯದ ವಿರುದ್ಧದ ಹೋರಾಟಕ್ಕೆ ಸಂದ ಜಯ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಬಣ್ಣಿಸಿದ್ದಾರೆ. ದೇಶದಲ್ಲೇ ಒಂದು ಪ್ರಕರಣದಲ್ಲಿ ಇಷ್ಟು ಮಂದಿ ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

- Advertisement -

Latest News

error: Content is protected !!