ಬೆಳ್ತಂಗಡಿ; ನಮ್ಮ ಆಯುಷ್ಯದಲ್ಲಿ ಜೀವಿಸುವುದು ಮುಖ್ಯವಲ್ಲ. ಹೇಗೆ ಬದುಕಿದ್ದೇವೆ ಎಂಬುದು ಬಹಳ ಮುಖ್ಯ ಎಂದು ಅಳದಂಗಡಿ ಅಜಿಲಸೀಮೆಯ ತಿಮ್ಮಣ್ಣರಸ ಡಾ. ಪದ್ಮಪ್ರಸಾದ ಅಜಿಲ ಹೇಳಿದರು.
ತಾ.ಪಂ ವಿಶ್ರಾಂತ ಅಧೀಕ್ಷಕ ಪ್ರಶಾಂತ್ ಬಳಂಜ ಅವರಿಂದ ಎಸ್.ಡಿ.ಎಂ ಕಲಾ ಭವನದಲ್ಲಿ ಎ.4 ರಂದು ನಡೆದ ವಿಶಿಷ್ಟ ರೀತಿಯ ಕೃತಜ್ಞತಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಶಾಂತ್ ಬಳಂಜ ಅವರು ಉತ್ತಮ ಬರಹಗಾರರಾಗಿದ್ದು, ಅವರು ಮಾಧ್ಯಮದಲ್ಲಿ ನಮ್ಮಅಳದಂಗಡಿ ಅರಮನೆಯನ್ನು ಸಮಗ್ರವಾಗಿ ಪರಿಚಯಿಸಿದ್ದರು. ಪ್ರಶಾಂತ್ ಅವರ ಅಜ್ಜ, ತಂದೆ ಹಾಗೂ ಅವರು ಮೂರು ತಲೆಮಾರಿನ ಸಂಬಂಧವಿದೆ. ಸರಕಾರಿ ಹುದ್ದೆ ಕಷ್ಟದಾಯಕ ಆದರೆ ಪ್ರಶಾಂತ್ ಅವರು ಕಷ್ಟಕ್ಕೆ ಸಿಲುಕಿದವರಲ್ಲ. ಅಂತಹಾ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದಯವಾಣಿಯ ಉಪ ಮುಖ್ಯ ಸಂಪಾದಕ ಲಕ್ಷ್ಮೀ ಮಚ್ಚಿನ ವಹಿಸಿ ಮಾತನಾಡಿ, ಸಮಾಜದಿಂದ ತನಗೆ ಸಿಕ್ಕಿದ್ದನ್ನು ಮರಳಿಸುವ ಕಾರ್ಯಕ್ರಮವಾಗಿ ಈ ಸಮಾರಂಭ ಗೋಚರಿಸುತ್ತಿದೆ. ಸರಕಾರಿ ಅಧಿಕಾರಿಗಳು ಸಾರ್ವಜನಿಕ ಚಟುವಟಿಕೆಗಳಲ್ಲಿ ಇರಬಾರದು ಎಂಬ ನಿರ್ಬಂಧವಿದೆ. ಆದರೆ ಸರಕಾರಿ ಉದ್ಯೋಗಿ ಕೂಡ ಸಮಾಜ ಸೇವೆ ಮಾಡಬಹುದು ಎಂಬುದನ್ನು ಪ್ರಶಾಂತ್ ಬಳಂಜ ತೋರಿಸಿಕೊಟ್ಟಿದ್ದಾರೆ ಎಂದರು.

ಸಮಾರಂಭದಲ್ಲಿ ತಹಶಿಲ್ದಾರ್ ಪೃಥ್ವಿ ಸಾನಿಕಮ್, ಮೈಸೂರು ಅರಮನೆಯ ತಾಂತ್ರಿಕ ವಿಭಾಗದ ನಿವೃತ ಮುಖ್ಯಸ್ಥ ರಾಜಶೇಖರ ಗೌಡ, ಹೈಕೋರ್ಟ್ ಹಿರಿಯ ನ್ಯಾಯವಾದಿ ಕೆ ಶಿವಪ್ರಕಾಶ್ ಹೆಗ್ಡೆ, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್, ಮೂಡಬಿದ್ರೆಯ ತಾ.ಪಂ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಂಜ ಮಂಡಲ ಪಂಚಾಯತ್ ಮಾಜಿ ಅಧ್ಯಕ್ಷ ವಸಂತ ಸಾಲಿಯಾನ್, ಪಿಡಿಒ ಗಳಾದ ರಾಜಶೇಖರ ರೈ ಪಡಂಗಡಿ, ಮೋಹನ ಬಂಗೇರ ಮತ್ತು ಸಫಾನಾ, ಸುದ್ದಿ ಬಿಡುಗಡೆಯ ವ್ಯವಸ್ಥಾಪಕ ಮಂಜುನಾಥ ರೈ, ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್ ಕುಲಾಲ್, ಗ್ರಾ.ಪಂ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಬೊಳ್ಮ, ಜಿಲ್ಲಾಧ್ಯಕ್ಷ ಸತೀಶ್ ನಾರಾವಿ, ತಾ. ಅಧ್ಯಕ್ಷ ರುಕೇಶ್, ತಾ.ಪಂ ವಿಷಯ ನಿರ್ವಾಹಕ ಮಂಜು, ವಸತಿ ಯೋಜನೆಯ ನೋಡೆಲ್ ಅಧಿಕಾರಿ ಪ್ರಶಾಂತ್ ಇವರನ್ನು ಪ್ರಶಾಂತ್ ಬಳಂಜ ಅವರು ವಿಶೇಷ ರೀತಿಯಲ್ಲಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ರುವಾರಿ, ತಾ.ಪಂ ನಿವೃತ್ತ ಅಧೀಕ್ಷಕ ಪ್ರಶಾಂತ ಬಳಂಜ ಸ್ವಾಗತಿಸಿ ಪ್ರಸ್ತಾವನೆಗೈದರು. ಶಿಕ್ಷಕ ಅರವಿಂದ ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ನ್ಯಾಯವಾದಿ ಕೆ. ಪ್ರಕಾಶ್ ಹೆಗ್ಡೆ, ಪ್ರಶಾಂತ್ ಅವರ ತಾಯಿ, ಪತ್ನಿ ಪ್ರಮೀಳಾ, ಪುತ್ರಿ ಡಾ.ಪ್ರಶಂಸಾ ಉಪಸ್ಥಿತರಿದ್ದರು.


