ಉಡುಪಿ: ಕಳ್ಳತನ ಯತ್ನ ಪ್ರಕರಣದ ಆರೋಪಿಯೊಬ್ಬ ವೀಲ್ಹಿಂಗ್ ಮಾಡಿ ಪೊಲೀಸರಿಂದ ಲಾಕ್ ಆದ ಘಟನೆ ಹೆಮ್ಮಾಡಿ–ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಪೌಜಾನ್ ಅಹ್ಮದ್ ಬಂಧಿತ ಆರೋಪಿ.
ಪೌಜಾನ್ ಅಹ್ಮದ್ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕೋಣಮಕ್ಕಿ ಎಂಬಲ್ಲಿ ಫಾತಿಮಾ ಎಂಬವರ ಮನೆಯ ಹಿಂಬಾಗಿಲು ಒಡೆದು ಒಳನುಗ್ಗಿ ಕಳ್ಳತನ ಯತ್ನ ನಡೆಸಿದ್ದಾನೆ. ಫಾತಿಮಾ ಅವರು ಮಲಗಿದ್ದ ವೇಳೆ ಮನೆಗೆ ನುಗ್ಗಿದ ಆರೋಪಿ, ಮನೆಯಲ್ಲಿದ್ದ ಗೋದ್ರೇಜ್ ಅಲಮಾರಿಯನ್ನು ತೆರೆದು ಹುಡುಕಾಡುತ್ತಿದ್ದಾಗ ಶಬ್ದ ಕೇಳಿ ಎಚ್ಚರಗೊಂಡ ಫಾತಿಮಾ ಅವರು ಬೊಬ್ಬೆ ಹಾಕಿದಾಗ ಆರೋಪಿ ಹಿಂಬಾಗಿಲಿನಿಂದ ಪರಾರಿಯಾಗಿದ್ದ
ಈ ಕುರಿತು ಪಾತಿಮಾ ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2026 ರಂತೆ BNS ಕಲಂ 331(4), 305, 62 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ಆರೋಪಿ ಹೆಮ್ಮಾಡಿ–ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಡಿಗೆಗೆ ತಂದಿದ್ದ ಸ್ಕೂಟರ್‌ನಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಮಾಡಿ, ಚಲಿಸುತ್ತಿದ್ದ ವಾಹನದಲ್ಲೇ ತರಹೇವಾರಿ ಸರ್ಕಸ್ ಪ್ರದರ್ಶಿಸಿದ್ದನು. ಈ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.


