ಬೆಂಗಳೂರು: ಅಧಿವೇಶನದಲ್ಲಿ ಶಾಸಕರ ಪ್ರಶ್ನೆಗಳಿಗೆ ಸಮರ್ಪಕವಾಗಿ ಸಚಿವರು ಉತ್ತರ ಕೊಡದ ಹಿನ್ನೆಲೆಯಲ್ಲಿ ವಿಧಾನಸಭೆ ಸ್ಪೀಕರ್ ಪೀಠ ಬಿಟ್ಟು ತೆರಳಿರುವ ಘಟನೆ ನಡೆದಿದೆ.
ಸಚಿವರು ಉತ್ತರ ಕೊಡದಿರಲು ಕಾರಣ ಹೇಳುವವರೆಗೂ ಸದನ ನಡೆಸುವುದಿಲ್ಲ ಎಂದು ಕಲಾಪ ಮೊಟಕು ಮಾಡಿ ಪೀಠದಿಂದ ಸ್ಪೀಕರ್ ಯು.ಟಿ. ಖಾದರ್ ಎದ್ದು ಹೋಗಿದ್ದಾರೆ.
ಇಂದು ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಲಿಖಿತ ರೂಪದ 230 ಪ್ರಶ್ನೆಗಳ ಪೈಕಿ ಪೈಕಿ 84 ಪ್ರಶ್ನೆಗಳಿಗೆ ಮಾತ್ರ ಸರ್ಕಾರ ಉತ್ತರ ಮಂಡನೆ ಮಾಡಿತ್ತು. ಈ ವೇಳೆ ವಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.
ಸಚಿವರು ಹೀಗಾದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿರುವ ಸ್ಪೀಕರ್, ಮೂರು ಸಲ ನಾನು ಸಚಿವರಿಗೆ ಹೇಳಿದರೂ ಸುಧಾರಣೆ ಕಂಡು ಬರುತ್ತಿಲ್ಲ,
ಸಂಬಂಧಿಸಿದ ಸಚಿವರು ಬಂದು ಸ್ಪಷ್ಟನೆ, ಕಾರಣ ಕೊಡುವವರೆಗೂ ನಾನು ಸದನ ನಡೆಸುವುದಿಲ್ಲ ಎಂದು ಹೇಳಿ ಸ್ಪೀಕರ್ ಖಾದರ್ ತಮ್ಮ ಪೀಠದಿಂದ ಎದ್ದು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪ ಕೆಲವು ಕಾಲ ಮುಂದೂಡಿಕೆಯಾಗಿದೆ.


