ಸವಣೂರು: ಸಾಲ ಕೊಟ್ಟಿದ್ದನ್ನು ಕೇಳಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಸವಣೂರು ಪೇಟೆಯಲ್ಲಿ ನಡೆದಿದೆ.
ಕುದ್ಮಾರು ನಿವಾಸಿ ಮೋನಪ್ಪ ಗೌಡ (32) ಎಂಬವರು ಮೊಟ್ಟೆ ಲೈನ್ ಸೇಲ್ ವ್ಯಾಪಾರ ಮಾಡುತ್ತಿದ್ದು, ಪರಿಚಯದ ಮೋಕ್ಷಿತ್ ಇಡ್ಯಾಡಿ ಎಂಬವರು ಸುಮಾರು ಒಂದು ವರ್ಷದ ಹಿಂದೆ ಅವರಿಂದ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ. ಈ ಹಣವನ್ನು ವಾಪಾಸ್ ನೀಡುವಂತೆ ಕೇಳಿದರೂ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ ಎನ್ನಲಾಗಿದೆ.
ದಿನಾಂಕ 07.03.2026 ರಂದು ಸಂಜೆ ಮೋನಪ್ಪ ಗೌಡ ಅವರು ವ್ಯಾಪಾರದ ನಿಮಿತ್ತ ಸವಣೂರು ಪೇಟೆಗೆ ಹೋಗಿದ್ದಾಗ, ಅಲ್ಲಿರುವ ಬೇಕರಿಯೊಂದರಲ್ಲಿ ಮೋಕ್ಷಿತ್ ಅವರನ್ನು ಕಂಡು ಹಣದ ಬಗ್ಗೆ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೋನಪ್ಪ ಗೌಡ ಅವರು ತಮ್ಮ ವಾಹನದ ಬಳಿ ತೆರಳುತ್ತಿದ್ದಾಗ, ಮೋಕ್ಷಿತ್ ಮತ್ತು ಆತನ ತಮ್ಮ ರಂಜಿತ್ ಎಂಬವರು ಮರದ ದೊಣ್ಣೆಯಿಂದ ಮೋನಪ್ಪ ಅವರ ತಲೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ಸಂದರ್ಭದಲ್ಲಿ ಮೋನಪ್ಪ ಅವರ ಅಣ್ಣ ನಾರಾಯಣ ಗೌಡ ಅವರು ತಡೆಯಲು ಬಂದಾಗ ಅವರನ್ನೂ ಎಳೆದಾಡಿ ಹಲ್ಲೆ ನಡೆಸಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸುತ್ತಿರುವುದನ್ನು ಕಂಡು ಆರೋಪಿಗಳು ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮೋನಪ್ಪ ಗೌಡ ಅವರು ನೀಡಿದ ದೂರಿನ ಆಧಾರದ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 20/2026 ರಂತೆ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS-2023) ಯ ವಿವಿಧ ಕಲಂಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


