ಬೆಂಗಳೂರು: ತಮ್ಮ ಗ್ರಾಮದ ನೀರಿನ ಸಮಸ್ಯೆ ಬಗ್ಗೆ ಪತ್ರ ಬರೆದಿದ್ದ ಪುಟ್ಟ ಮಕ್ಕಳ ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮಕ್ಕೆ ನೀರಾವರಿ ಯೋಜನೆ ಘೋಷಿಸಿ 490 ಕೋಟಿ ರೂಪಾಯಿ ಹಣ ಮೀಸಲಿಟ್ಟಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ನೀರಿನ ಸಮಸ್ಯೆ ಕುರಿತು ಕೆಲವು ಸಮಯದ ಹಿಂದೆ ಮಕ್ಕಳು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದು ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದರು.
ಮಕ್ಕಳ ಕೋರಿಕೆಯ ಮೇರೆಗೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದ ಸಿಎಂ, ಆ ಹಳ್ಳಿಗೆ ಸಮರ್ಪಕ ನೀರಾವರಿ ಯೋಜನೆಯೊಂದರ ಅಗತ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್ ನಲ್ಲಿ ಉಡುತೊರೆಹಳ್ಳ ನೀರಾವರಿ ಯೋಜನೆಯನ್ನು ಘೋಷಿಸಿ, 490 ಕೋಟಿ ರೂಪಾಯಿ ಅನುದಾನವನ್ನು ಸಹ ಮೀಸಲಿಟ್ಟಿದ್ದಾರೆ.
ಅಹವಾಲು ಸಲ್ಲಿಸಿದ ಮಕ್ಕಳ ಧ್ವನಿ ಎಳೆಯದಾದರೂ, ಅದನ್ನು ಕಡೆಗಣಿಸದೇ ಮುಕ್ತವಾಗಿ ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ತಾಯಿಯ ಹೃದಯ ನಮ್ಮ ಸರ್ಕಾರದ್ದು. ಪುಟಾಣಿ ಮಕ್ಕಳ ಧನ್ಯವಾದವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ, ನನ್ನ ಮತ್ತು ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಟ್ಟು ತಮ್ಮ ಕಷ್ಟವನ್ನು ನಮ್ಮ ಗಮನಕ್ಕೆ ತಂದು, ಇಂದು ಸಾವಿರಾರು ಕುಟುಂಬಗಳ ಭವಿಷ್ಯ ಬದಲಾಗಲು ಕಾರಣರಾದ ಪುಟಾಣಿಗಳಿಗೂ ಪ್ರೀತಿ ತುಂಬಿದ ಅಪ್ಪುಗೆಗಳು ಎಂದೂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.


