ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ಸುರತ್ಕಲ್ ಪೊಲೀಸ್ ರಾಷಾ ವ್ಯಾಪ್ತಿಯಲ್ಲಿ 2017 ನೇ ಇಸವಿಯಲ್ಲಿ ಲೆಫ್ಟಿ ಸಹ್ವಾನ್ ಎಂಬಾತನನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣದಲ್ಲಿ 09 ವರ್ಷಗಳಿಂದ ದಸ್ತಗಿರಿಗೆ ಸಿಗದೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿನ ಡಿ.ಜಿ.ಹಳ್ಳಿಯ ಶ್ಯಾಮ್ ಪುರ್ ರೈಲ್ವೆ ಗೇಟ್ ಬಳಿ ಬಂಧಿಸಿದ್ದಾರೆ.
ಮೂಲತಃ ಬಳ್ಳಾರಿ ಜಿಲ್ಲೆಯವನಾದ ಸದ್ಯ ಬೆಂಗಳೂರು ಉತ್ತರ ತಾಲೂಕಿನಲ್ಲಿ ವಾಸವಾಗಿದ್ದ ಮೊಹಮ್ಮದ್ ಸೂಫಿಯಾನ ಹುಸೇನ್ ಕೊಟ್ರೇಶಿ(31) ಬಂಧಿತ ಆರೋಪಿ.
ಮೊಹಮ್ಮದ್ ಸೂಫಿಯಾನ ಹುಸೇನ್ ಕೊಟ್ರೇಶಿ ಕುಖ್ಯಾತ ರೌಡಿಶೀಟರ್ ಸಫ್ಘಾನ್ ಹುಸೈನ್ ನ ಸಹಚರನಾಗಿದ್ದು, 2017 ನೇ ಇಸವಿಯಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಫ್ಘಾನ್ ಹುಸೈನ್ ಹಾಗೂ ಆತನ ಸಹಚರರೊಂದಿಗೆ ಸೇರಿಕೊಂಡು ಲೆಫ್ಟಿ ಸಹ್ವಾನ್ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿ, ಕೊಲೆ ಮಾಡಿ ಆಗುಂಬೆ ಘಾಟಿಯಲ್ಲಿ ಎಸೆದ ಪ್ರಕರಣದಲ್ಲಿ ನೇರ ಭಾಗಿಯಾಗಿ ಬಳಿಕ ಬಂಧನಕ್ಕೆ ಸಿಗದೇ ತಲೆಮರೆಸಿಕೊಂಡಿದ್ದನು. ಬಳಿಕ ಗುಲ್ಬರ್ಗಾ, ಬಳ್ಳಾರಿ, ಮುಂಬೈ, ಹಾಗೂ ಅಂಧ್ರಪ್ರದೇಶದ ರಾಯ್ ಜೋಟಿ ಪ್ರದೇಶದಲ್ಲಿ ತಲೆಮರೆಸಿಕೊಂಡು ಬಳಿಕ ಬೆಂಗಳೂರಿನಲ್ಲಿ ತನ್ನ ನೂಪಿಯಾನ್ ಎಂಬ ಹೆಸರನ್ನು ಮೊಹಮ್ಮದ್ ಹುಸೈನ್ ಎಂದು ಬದಲಿಸಿ, ಆಧಾರ್ ಕಾರ್ಡ್, ಪಾಸ್ ಪೋರ್ಟ್, ಡೈವಿಂಗ್ ಲೈಸನ್ಸ್ ಮಾಡಿಸಿಕೊಂಡು ಬೆಂಗಳೂರಿನ ಯುವತಿಯನ್ನು ವಿವಾಹವಾಗಿ ಜೀವನ ನಡೆಸುತ್ತಿದ್ದನು.
ಈತನು 2012ನೇ ಇಸವಿಯಲ್ಲಿ ಬಳ್ಳಾರಿ ಜಿಲ್ಲೆಯ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದ ಸಮಯ ತನ್ನ ಗುರುತು ವೃದ್ಧೆಗೆ ಸಿಕ್ಕಿತೆಂದು ತಿಳಿದು ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದು ಈ ಪ್ರಕರಣದಲ್ಲಿ ಅರೆಸ್ಟ್ ಆಗಿ 4 ವರ್ಷಗಳ ಕಾಲ ಬಳ್ಳಾರಿ ಜೈಲಿನಲ್ಲಿದ್ದು, ಆ ಸಮಯ ಸಲ್ಮಾನ್ ಹುಸೈನ್ ಮತ್ತು ಆತನ ಸಹಚರರ ಪರಿಚಯವಾಗಿ ಅವರ ಸಹಾಯದಿಂದ ಜಾಮೀನು ಪಡೆದುಕೊಂಡು ನಂತರ ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಕೊಟ್ರೇಶಿ ಎಂಬ ಹೆಸರನ್ನು ಸೂಫಿಯಾನ ಎಂದು ಬದಲಾಯಿಸಿಕೊಂಡು ಸಫಾನ್ ಹುಸೈನ್ ನ ಜೊತೆಯಲ್ಲಿ ಮಂಗಳೂರಿಗೆ ಬಂದು ಅವರ ಗ್ಯಾಂಗ್ ನಲ್ಲಿದ್ದನು.
ನಂತರ ಸಫ್ಘಾನ್ ಹುಸೈನ್ ಮತ್ತು ಸಹಚರರ ಗ್ಯಾಂಗ್ ನಲ್ಲಿ ಸೇರಿಕೊಂಡು 2017ನೇ ಇಸವಿಯಲ್ಲಿ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಬೆದರಿಸಿ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿ ಈ ಪ್ರಕರಣದಲ್ಲಿ ಕೂಡ ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಬಳ್ಳಾರಿಯ ಹೊಸಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣದಲ್ಲಿ ಸಹ ಭಾಗಿಯಾಗಿದ್ದ.
ಆರೋಪಿ ಸೂಫಿಯಾನ @ ಕೊಟ್ರೇಶಿ ಎಂಬಾತನ ವಿರುದ್ಧ ಒಟ್ಟು 04 ಪ್ರಕರಣಗಳು ದಾಖಲಾಗಿದ್ದು, 1) ಸುರತ್ಕಲ್ ನ ಲೆಫ್ಟಿ ಸಫಾನ್ ನ ಕೊಲೆ ಪ್ರಕರಣ, 2) ಬಳ್ಳಾರಿ ಬ್ರೂಸ್ ವೇಟ್ ಠಾಣಾ ವ್ಯಾಪ್ತಿಯ ವೃದ್ಧೆಯ ಕೊಲೆ ಪ್ರಕರಣ, 3) ಹೊಸಪೇಟೆಯಲ್ಲಿ ಬೈಕ್ ಕಳ್ಳತನ, 4) ಬಜಪೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಹಣ ಸುಲಿಗೆ ಮಾಡಿದ ಪ್ರಕರಣ ದಾಖಲಾಗಿರುತ್ತದೆ. ಈತನನ್ನು ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ಪಡೆದುಕೊಂಡು ತನಿಖೆಗೆ ಒಳಪಡಿಸಲಿದ್ದಾರೆ.


