ಮಂಗಳೂರು: ಮಧ್ಯಪ್ರಾಚ್ಯದಲ್ಲಿ ನಡುವೆ ಯುದ್ಧದ ಭೀತಿ ಹೆಚ್ಚಾಗಿದ್ದು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇದರ ನೇರ ಪರಿಣಾಮ ಉಂಟಾಗಿದೆ.
ಗಲ್ಫ್ ರಾಷ್ಟ್ರಗಳಿಗೆ ತೆರಳಬೇಕಿದ್ದ ವಿಮಾನಯಾನದಲ್ಲಿ ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಭಾರಿ ವ್ಯತ್ಯಯ ಉಂಟಾಗಿದೆ.
ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ IX 831 ವಿಮಾನವನ್ನು ರದ್ದುಗೊಳಿಸಲಾಗಿದ್ದು, ಅದರಲ್ಲಿದ್ದ 180 ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಇನ್ನು ದೋಹಾಕ್ಕೆ ಹೊರಟಿದ್ದ IX 821 ವಿಮಾನವನ್ನು ಮುಂಬೈಗೆ ಡೈವರ್ಟ್ ಮಾಡಲಾಗಿದ್ದು, ಏರ್ ಇಂಡಿಯಾ ಎಕ್ಸ್ ಪ್ರೆಸ್ ನ IX 847, IX 813, IX 851 ಮತ್ತು ಇಂಡಿಗೋದ 6E 1467 ಸೇರಿದಂತೆ ಒಟ್ಟು ಎಂಟು ವಿಮಾನಗಳು ರದ್ದಾಗಿವೆ.
ಕುವೈತ್, ದಮ್ಮಾಮ್, ಅಬುಧಾಬಿ ಸೇರಿದಂತೆ ವಿವಿಧ ನಗರಗಳಿಗೆ ತೆರಳಬೇಕಿದ್ದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಸಿಲುಕಿಕೊಂಡಿದ್ದು, ಪರದಾಡುವಂತಾಗಿದೆ.
ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ತಮ್ಮ ಏರ್‌ಲೈನ್ಸ್ ಸಂಸ್ಥೆಯನ್ನು ಸಂಪರ್ಕಿಸಿ ವಿಮಾನದ ಸ್ಥಿತಿಗತಿಯನ್ನು ಖಚಿತಪಡಿಸಿಕೊಳ್ಳುವಂತೆ ವಿಮಾನಯಾನ ಸಂಸ್ಥೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.


