ಪುತ್ತೂರು: ಹಾರಾಡಿ ಸೇತುವೆ ಬಳಿ ರೈಲು ಡಿಕ್ಕಿಯಾಗಿ ಯುವಕ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವಕನ ಗುರುತು ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಪ್ರಕರಣ ಅನ್ನೋದು ಗೊತ್ತಾಗಿದೆ. ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿ ನಿವಾಸಿ ಸುಮತಿ ಎಂಬವರ ಪುತ್ರ ಪವನ್ ಕುಮಾರ್ ಮೃತ ದುರ್ದೈವಿ.
ಕಬಕ ಪುತ್ತೂರು ರೈಲ್ವೆ ನಿಲ್ದಾಣದ ಬಳಿಯ ಹಾರಾಡಿ ಬ್ರಿಡ್ಜ್ ಸಮೀಪ ಫೆಬ್ರವರಿ 20 ರಂದು ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿತ್ತು. ಕಪ್ಪು ಪ್ಯಾಂಟ್, ಫುಲ್ ಕೈ ಶರ್ಟ್ ಧರಿಸಿ, ಕೈಯಲ್ಲಿ ವಾಚ್, ಪಕ್ಕದಲ್ಲೇ ಕಪ್ಪು ಬಣ್ಣದ ಬ್ಯಾಗ್ ಪತ್ತೆಯಾಗಿತ್ತು.
ಪವನ್ ಕುಮಾರ್ ಅವರು ಹಶಿಪ್ ಒಂದರಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗಷ್ಟೇ ರಜೆಯ ಮೇಲೆ ಊರಿಗೆ ಬಂದಿದ್ದರು . ನಿನ್ನೆ ಮಧ್ಯಾಹ್ನ ಮನೆ ಬಿಟ್ಟು ಹೋಗಿದ್ದ ಇವರು ತಾಯಿಯಲ್ಲಿ ನಾನು ಸಾಯುತ್ತೇನೆ ಎಂದು ಹೇಳಿದ್ದರಂತೆ. ಅಲ್ಲದೇ ತನ್ನ ಇನ್ಸ್ಟಾಗ್ರಾಂ ಅಕೌಂಟ್‍ನ ಡಿಪಿಯಲ್ಲೂ ` ಐ ಆ್ಯಮ್ ಡೆಡ್’ ಅನ್ನೋ ಡಿಪಿ ಹಾಕಿಕೊಂಡಿದ್ದರು. ಮಗ ಮನೆಯಿಂದ ಹೋದವ ವಾಪಸ್ ಬರಲಿಲ್ಲವೆಂದು ಈತನ ತಾಯಿ ಸುಮತಿಯವರು ರಾತ್ರಿ ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಸದಸ್ಯ ಸುರೇಶ್ ಅತ್ರಮಜಲು ಅವರ ಗಮನಕ್ಕೆ ತಂದಿದ್ದು, ಈತನ ಬಗ್ಗೆ ಇವರು ಮಾಹಿತಿ ಕಲೆ ಹಾಕುತ್ತಿದ್ದಾಗ ರೈಲ್ವೇ ಹಳಿಯಲ್ಲಿ ಮೃತದೇಹ ಪತ್ತೆಯಾದ ಸುದ್ದಿ ತಿಳಿದುಬಂತು. ಪರಿಶೀಲನೆ ನಡೆಸಿದಾಗ ಇದು ಈತನದ್ದೇ ಮೃತದೇಹ ಎಂದು ತಿಳಿದುಬಂತು. ಮಾನಸಿಕ ಖಿನ್ನತೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು, ಮೃತ ಪವನ್ ಕುಮಾರ್ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.


