ಉಳ್ಳಾಲ: ಮಂಜನಾಡಿಯ ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಫೆ. 6ರಿಂದ ಫೆ. 25ರವರೆಗೆ ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು, ಮಂಜನಾಡಿ ಇದರ ಆಶ್ರಯದಲ್ಲಿ ಹಾಗೂ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಅಧೀನದಲ್ಲಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ, ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಯೆನೆಪೋಯ ನ್ಯಾಚುರೋಪತಿ ಅಂಡ್ ಯೋಗ ಸೈನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಿನ್ಸಿಪಾಲ್ ಡಾ. ಪುನೀತ್ ಅವರು, ಪ್ರಮಾಣಾಧಾರಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನಗಳು, ಔಷಧ ರಹಿತ ಹಾಗೂ ಸಹಜ ತೂಕ ನಿಯಂತ್ರಣ ಕ್ರಮಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿದ್ದು, ಅನುಭವಿ ಹಾಗೂ ಅರ್ಹ ವೈದ್ಯರಿಂದ ಮಾರ್ಗದರ್ಶನ ಲಭ್ಯವಾಗಲಿದೆ ಎಂದು ತಿಳಿಸಿದರು.
ಆಸಕ್ತರು ತ್ವರಿತವಾಗಿ ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ನೋಂದಣಿಗೆ ಫೆಬ್ರವರಿ 21 ಕೊನೆಯ ದಿನಾಂಕವಾಗಿದೆ.ಇನ್ನು ಈ ಕಾರ್ಯಕ್ರಮದ ಅಂಗವಾಗಿ, ಸ್ಥೂಲಕಾಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಯೆನೆಪೋಯ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಫೆಬ್ರವರಿ 14ರಂದು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಯೆನೆಪೋಯ ಪ್ರಕೃತಿ ಚಿಕಿತ್ಸೆ ವಿದ್ಯಾರ್ಥಿಗಳಿಗಾಗಿ ಸ್ಥೂಲಕಾಯದ ತಡೆ ಮತ್ತು ನಿರ್ವಹಣೆ ಕುರಿತು ವಿಶೇಷ ಅತಿಥಿ ಉಪನ್ಯಾಸವನ್ನು ಕೂಡ ಆಯೋಜಿಸಲಾಗಿದೆ. ಈ ಉಪನ್ಯಾಸದಲ್ಲಿ ಸ್ಥೂಲಕಾಯದ ವೈಜ್ಞಾನಿಕ ಹಿನ್ನೆಲೆ, ಜೀವನಶೈಲಿ ಪರಿವರ್ತನೆ ಮತ್ತು ಯೋಗ–ಪ್ರಕೃತಿ ಚಿಕಿತ್ಸೆಯ ಪಾತ್ರ ಕುರಿತು ವಿವರವಾಗಿ ಚರ್ಚಿಸಲಾಗುತ್ತದೆ.ಸಾಮಾನ್ಯ ಜನರಿಗಾಗಿ ಸ್ಥೂಲಕಾಯ ಹಾಗೂ ಅದರೊಂದಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು, ಅವುಗಳ ತಡೆ ಮತ್ತು ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಸಹ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.


