ಮಂಗಳೂರು: ಬಹುಮುಖ ಪ್ರತಿಭೆ ಸ್ವಾತಿ ಆರ್ಟ್ಸ್ ನ ಸ್ವಾತಿ ಸತೀಶ್ ಎಂದೇ ಚಿರಪರಿಚಿತರಾಗಿದ್ದ ಸತೀಶ್(49) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಡಿಪು ನಿವಾಸಿ ಸತೀಶ್ ಅವರು ಶನಿವಾರ ವೈಯಕ್ತಿಕ ಕಾರಣಗಳಿಂದ ಮನನೊಂದಿದ್ದ ಅವರು ಮುಡಿಪುವಿನ ಮಿತ್ತಬಾರೆ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
ಸತೀಶ್ ಅವರು ಮುಡಿಪುವಿನಲ್ಲಿ ‘ಸ್ವಾತಿ ಆರ್ಟ್ಸ್’ ಬ್ಯಾನರ್ ಅಡಿಯಲ್ಲಿ ಕಳೆದ ಮೂರೂವರೆ ದಶಕಗಳಿಂದ ಸೃಜನಶೀಲ ಮತ್ತು ಲಲಿತಕಲೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಚಿತ್ರಕಲೆ ಅಥವಾ ಸಂಗೀತದಲ್ಲಿ ಯಾವುದೇ ಔಪಚಾರಿಕ ತರಬೇತಿ ಪಡೆಯದಿದ್ದರೂ, ಸ್ವಯಂ ಆಸಕ್ತಿಯಿಂದ ಈ ಎರಡನ್ನೂ ಕಲಿತು, ಅವುಗಳನ್ನೇ ತಮ್ಮ ವೃತ್ತಿ ಮತ್ತು ಜೀವನೋಪಾಯವನ್ನಾಗಿ ಮಾಡಿಕೊಂಡಿದ್ದರು.
ನುರಿತ ಕೀಬೋರ್ಡ್ ವಾದಕರಾಗಿದ್ದ ಸತೀಶ್ ಅವರು ಸಾವಿರಾರು ಕಾರ್ಯಕ್ರಮಗಳಿಗೆ ಸಂಗೀತ ಪಕ್ಕವಾದ್ಯವನ್ನು ಒದಗಿಸಿದ್ದರು. ಸ್ವತಃ ಸಂಗೀತ ಸಂಯೋಜಕರೂ ಆಗಿದ್ದ ಅವರು, ಅನೇಕ ವಿದ್ಯಾರ್ಥಿಗಳಿಗೆ ಕೀಬೋರ್ಡ್ ತರಗತಿಗಳನ್ನು ನಡೆಸಿ ಸಂಗೀತ ಶಿಕ್ಷಣ ನೀಡುತ್ತಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ವಿನ್ಯಾಸ (ಬ್ಯಾಕ್‌ಡ್ರಾಪ್), ಮೇಕಪ್, ಸಿಮೆಂಟ್ ಶಿಲ್ಪಕಲೆ, ಕರಕುಶಲ ಮತ್ತು ಬ್ಯಾನರ್ ಬರವಣಿಗೆಯಲ್ಲಿ ಅವರು ಪರಿಣಿತರಾಗಿದ್ದರು.


