ಬೆಂಗಳೂರು; ಕನ್ನಡದನೀನಾದೆ ನಾʼ ಧಾರಾವಾಹಿ ಖ್ಯಾತಿಯ ನಟಿ ನಂದಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರದಲ್ಲಿ ನಡೆದಿದೆ.
ಮೂಲತಃ ಬಳ್ಳಾರಿಯ ಕೊಟ್ಟೂರಿನವರಾದ ನಂದಿನಿ ಸಿ.ಎಂ ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಕನ್ನಡದ ʻಜೀವ ಹೂವಾಗಿದೆʼ, ʻಸಂಘರ್ಷʼ, ʻಮಧುಮಗಳುʼ, ʻನೀನಾದೆ ನಾʼ ಧಾರಾವಾಹಿಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲ ತಮಿಳು ಧಾರಾವಾಹಿಯಲ್ಲೂ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು. ತಮಿಳಿನ ʻಗೌರಿʼ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ʻಕನಕʼ ಹಾಗೂ ʻದುರ್ಗಾʼ ಎನ್ನುವ ದ್ವಿಪಾತ್ರದಲ್ಲಿ ಅವರು ನಟಿಸುತ್ತಿದ್ದರು.ನಂದಿನಿ ಅವರ ಆತ್ಮಹತ್ಯೆಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.
ಶಾಲಾ ಶಿಕ್ಷಕರಾಗಿದ್ದ ನಂದಿನಿ ತಂದೆ ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು. ತಂದೆ ನಿಧನ ಬಳಿಕ ಆ ಕೆಲಸ ತಾನು ಮಾಡುವಂತೆ ಮನೆಯವರು ಒತ್ತಾಯಿಸಿದ್ದರು. ಆದ್ರೆ ಟೀಚರ್ ಕೆಲಸ ನಂದಿನಿಗೆ ಇಷ್ಟವಿರಲಿಲ್ಲವಂತೆ.
ಅಲ್ಲದೇ ಅನಾರೋಗ್ಯ ಸಮಸ್ಯೆಯಿಂದ ನೊಂದಿದ್ದ ನಂದಿನಿ, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.


