ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ, ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವ ಇದ್ದು, ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವ ಪ್ರಶ್ನೆ ಇಲ್ಲ
ರಾಜ್ಯದಲ್ಲಿ ಹೋರಾಟದಿಂದ ಮೇಲೆ ಬಂದವರು ಯಡಿಯೂರಪ್ಪನವರು ಮತ್ತು ದೇವೇಗೌಡರು ಮಾತ್ರ, ಹಾಗಾಗಿ ಯಡಿಯೂರಪ್ಪನವರಿಗೆ ಎಷ್ಟು ಗೌರವ ಕೊಡುತ್ತೇವೋ ಅಷ್ಟೇ ಗೌರವ ದೇವೇಗೌಡರಿಗೂ ಕೊಡುತ್ತೇವೆ ಎಂದು ಹೇಳಿದ್ದಾರೆ.
ಎರಡು ಬಾರಿ ಬಿಜೆಪಿ ಸ್ಪಷ್ಟ ಬಹುಮತದಿಂದ ವಂಚಿತವಾಗಿರುವ ಕಾರಣ,ನಮ್ಮ ಕಾರ್ಯಕರ್ತರಿಗೆ ವಿಶ್ವಾಸ ಬರುವಂತೆ ಮಾತಾಡಬೇಕಿರುವುದು ರಾಜ್ಯಾಧ್ಯಕ್ಷನಾಗಿ ನನ್ನ ಕರ್ತವ್ಯವಾಗಿದೆ, ಹಾಗಾಗಿ 2028ಕ್ಕೆ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಬಗ್ಗೆ ಮಾತನಾಡಿದ್ದೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಜೆಡಿಎಸ್ ಜೊತೆಗೆ ಮೈತ್ರಿ ಇದು ಮೋದಿಯವರ ಅಪೇಕ್ಷೆಯಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಿಗೆ ಹೋಗಬೇಕು ಅಂತಾ ಅಪೇಕ್ಷೆ ಆದರೆ ಅದನ್ನು ನಾವು ಸ್ವಾಗತಿಸುತ್ತೇವೆ ಎಂದೂ ವಿಜಯೇಂದ್ರ ಹೇಳಿದ್ದಾರೆ.
ಅಲ್ಲದೇ, ಮುಂದಿನ ಲೋಕಸಭಾ ಚುನಾವಣೆಗೆ ಮೈತ್ರಿ ಇರಲ್ಲ ಎಂದು ನಾನು ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿರುವ ಬಿ.ವೈ. ವಿಜಯೇಂದ್ರ, ಅಂತಿಮವಾಗಿ ಬಿಜೆಪಿ ಹೈಕಮಾಂಡ್ ದೇವೇಗೌಡರು, ಕುಮಾರಸ್ವಾಮಿಯವರು ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದಾರೆ.


