ವಿಟ್ಲ : ನಕಲಿ ದಾಖಲೆ ಸಲ್ಲಿಸಿ ಪಾಸ್ ಪೋರ್ಟ್ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾಸ್ ಪೋರ್ಟ್ ಪಡೆದ ಆರೋಪಿ ಶಕ್ತಿದಾಸ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಶಕ್ತಿ ದಾಸ್ ವಿಚಾರಣೆಯ ವೇಳೆ ತಾನು ಪಶ್ಚಿಮ ಬಂಗಾಳ ನಿವಾಸಿಯೆಂದು ತಿಳಿಸಿದ್ದಾನೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಆತನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ಮತ್ತೋರ್ವ ಆರೋಪಿತ ಪ್ರದೀಪ್ ಎಂಬಾತನನ್ನು ದಿನಾಂಕ:22.12.2025 ರಂದು ಇಲಾಖಾ ಕರ್ತವ್ಯದಿಂದ ಅಮಾನತ್ತುಗೊಳಿಸಲಾಗಿದೆ ಎನ್ನಲಾಗಿದೆ.
ಪ್ರಕರಣದ ವಿವರ;
ಶಂಕಿತ ಬಾಂಗ್ಲಾ ದೇಶದ ಪ್ರಜೆಗೆ ಪಾಸ್ ಪೋರ್ಟ್ ಮಾಡಲು ವಿಟ್ಲ ಪೊಲೀಸ್ ಠಾಣೆಯ ಪೇದೆ ಪ್ರದೀಪ್ ಎಂಬಾತ ಸಹಾಯ ಮಾಡಿ ಬಳಿಕ ಸಾಕ್ಷಿ ನಾಶ ಮಾಡಿದ ಪ್ರಕರಣ ಸಂಬಂಧ ನಕಲಿ ದಾಖಲೆ ನೀಡಿ ಪಾಸ್ ಪೋರ್ಟ್ ಮಾಡಿಸಿಕೊಂಡ ಶಂಕಿತ ಬಾಂಗ್ಲಾದೇಶ ಪ್ರಜೆ ಶಕ್ತಿ ದಾಸ್ ಮತ್ತು ವಿಟ್ಲ ಪೊಲೀಸ್ ಪೇದೆ ಪ್ರದೀಪ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಸಾಬು ಮಿರ್ಜಿ ಎಂಬವರು ನೀಡಿದ ದೂರಿನ ಮೇರೆಗೆ ಡಿ.20 ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಳಾಸದಲ್ಲಿ ವಾಸಿಸುವುದಾಗಿ ಶಂಕಿತ ಬಾಂಗ್ಲಾದೇಶ ಪ್ರಜೆ ಶಕ್ತಿ ದಾಸ್ ಎಂಬಾತ 2025 ಫೆಬ್ರವರಿ ತಿಂಗಳಲ್ಲಿ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಈ ಅರ್ಜಿಗೆ ವೆರಿಫಿಕೇಶನ್ ಮಾಡುವಾಗ ವಿಳಾಸ ತಾಳೆಯಾಗದಿದ್ದರಿಂದ ಬೀಟ್ ಸಿಬ್ಬಂದಿ ಸಾಬು ಮಿರ್ಜ ಅವರು ಪರಿಶೀಲನೆ ಮಾಡಿ ನಾ-ಶಿಫಾರಸ್ಸು ಮಾಡಿರುತ್ತಾರೆ. ಈ ಶಕ್ತಿ ದಾಸ್ 2025 ಜೂನ್ ತಿಂಗಳಲ್ಲಿ ಮರು ಅರ್ಜಿ ಸಲ್ಲಿಸಿದಾಗ ಆರೋಪಿ ಪೊಲೀಸ್ ಸಿಬ್ಬಂದಿ ಪ್ರದೀಪ್ ಅರ್ಜಿದಾರ ವಿಳಾಸದ ಬೀಟ್ ಸಿಬ್ಬಂದಿ ಸಾಬಿ ಮಿರ್ಜಿ ಎಂಬವರ ಹೆಸರಿನಲ್ಲಿ ವರದಿ ತಯಾರಿಸಿ ಪೋರ್ಜರಿ ಸಹಿ ಹಾಕಿ ಮೇಲಾಧಿಕಾರಿಗಳಿಂದ ಶಿಫಾರಸ್ಸು ಮಾಡಿಸಿ ಕಳುಹಿಸಿ ಕೊಟ್ಟಿರುತ್ತಾರೆ. ಈ ಬಗ್ಗೆ ಪರಿಶೀಲನಾ ದಾಖಲೆಗಳನ್ನು ಯಾರಿಗೂ ಗೊತ್ತಾಗಬಾರದೆಂದು ನಾಶಪಡಿಸಿರುತ್ತಾರೆ.ಈ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನು ಡಿ.19 ರಂದು ಪರಿಶೀಲನೆ ಮಾಡುವಾಗ ಈ ಕೃತ್ಯ ಬೆಳಕಿಗೆ ಬಂದಿದೆ.
ಈ ಬಗ್ಗೆ ನಕಲಿ ದಾಖಲೆಗಳನ್ನು ನೀಡಿ ಪಾಸ್ ಪೋರ್ಟ್ ಪಡೆದ ಶಂಕಿತ ಬಾಂಗ್ಲಾದೇಶದ ಪ್ರಜೆ ಶಕ್ತಿ ದಾಸ್ ಮತ್ತು ಸಿಬ್ಬಂದಿ ಪ್ರದೀಪ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಸಾಬು ಮಿರ್ಜಿ ನೀಡಿದ ದೂರಿನ ಮೇರೆಗೆ ಕಲಂ 336,337,316(5), 238 BNS 2023 ರಂತೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ತನಿಖೆ ಮಾಡಿದ ವಿಟ್ಲ ಪೊಲೀಸರು ಆರೋಪಿ ಪೊಲೀಸ್ ಸಿಬ್ಬಂದಿ ಪ್ರದೀಪ್ ನನ್ನು ಡಿ.22 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು.ನ್ಯಾಯಾಲಯ ಆರೋಪಿ ಪೇದೆ ಪ್ರದೀಪ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


