ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಏಳು ಕೋಟಿ ರೂ.ಗೂ ಹೆಚ್ಚಿನ ಮೊತ್ತದ ದರೋಡೆ ಪ್ರಕರಣದಲ್ಲಿ ಮಹತ್ವದ ಸುಳಿವು ದೊರೆತಿದ್ದು, ಕೃತ್ಯಕ್ಕೆ ಬಳಸಿದ್ದ ಕಾರು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಪತ್ತೆಯಾಗಿದೆ.
ದರೋಡೆಗೆ ಬಳಸಿದ್ದ ಕಾರು ಚಿತ್ತೂರಿನಲ್ಲಿ ಅನಾಮಧೇಯವಾಗಿ ನಿಂತಿದ್ದು, ಆರೋಪಿಗಳು ಹಣವನ್ನು ಮತ್ತೊಂದು ವಾಹನಕ್ಕೆ ಬದಲಾಯಿಸಿಕೊಂಡು ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ನಗರ ಪೊಲೀಸರ ತಂಡವೊಂದು ಆಂಧ್ರಪ್ರದೇಶಕ್ಕೆ ತೆರಳಿ ಕಾರನ್ನು ತಪಾಸಣೆ ನಡೆಸುತ್ತಿದೆ.ತಿರುಪತಿ, ಚಿತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅಲ್ಲಿನ ಲಾಡ್ಜ್‌ಗಳಲ್ಲಿ ಹುಡುಕಾಟ ನಡೆದಿದೆ. ಹೆದ್ದಾರಿ ಟೋಲ್‍ಗಳಲ್ಲಿ ಹಾದು ಹೋಗಿರುವ ವಾಹನಗಳನ್ನು ಸಿಸಿಟಿವಿಯಲ್ಲಿ ಪರಿಶೀಲಿಸಲಾಗಿದೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ನಗರ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ. ಆರೋಪಿಗಳು ಚಿತ್ತೂರಿನಿಂದ ಬೇರೆಡೆಗೆ ಪರಾರಿಯಾಗಿರುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಈ ನಡುವೆ ನಗರ ಪೊಲೀಸರು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಪತಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.


