Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಚಾರಣಪ್ರಿಯರಿಗೆ ನಾಳೆಯಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ

ಬೆಳ್ತಂಗಡಿ : ಚಾರಣಪ್ರಿಯರಿಗೆ ನಾಳೆಯಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ

- Advertisement -
- Advertisement -

ಬೆಳ್ತಂಗಡಿ : ಬಂಡಾಜೆ ಜಲಪಾತ ವೀಕ್ಷಣೆಗೆ ಚಾರಣಪ್ರಿಯರಿಗೆ ನ. 20 ರಿಂದ ಅವಕಾಶ ಕಲ್ಪಿಸಲಾಗಿದೆ.

ಕಳೆದ ಹಲವು ತಿಂಗಳಿನಿಂದ ಕಾಡ್ಗಿಚ್ಚು ಭಯ,ಮಳೆಗಾಲ ಇತ್ಯಾದಿ ಕಾರಣಗಳಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಹೇರಲಾಗಿತ್ತು. ಪ್ರಸ್ತುತ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೆ ಅವಕಾಶ ಕಲ್ಪಿಸಲಾಗಿದೆ ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದಿಂದ ಅಧಿಕೃತ ಮಾಹಿತಿ ಪ್ರಕಟಿಸಿದ್ದಾರೆ.

ಸುಮಾರು ನೂರಾರು ಅಡಿ ಎತ್ತರದಿಂದ ನೀರು ಧುಮ್ಮಿಕ್ಕುವ  ಬಂಡಾಜೆ ಜಲಪಾತ ಪ್ರದೇಶಕ್ಕೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದಿಂದ ಚಾರಣದ ಮೂಲಕ ತಲುಪಬಹುದು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಈ ಜಲಪಾತಕ್ಕೆ ಹೋಗಬೇಕಾದರೆ 11 ಕಿ.ಮೀ.ದೂರವನ್ನು ಚಾರಣದ ಮೂಲಕವೇ ತಲುಪಬೇಕು.

ಕಡಿರುದ್ಯಾವರದಿಂದ ಕಡಿದಾದ ಹಾದಿ, ಜಾರುವ ಬಂಡೆಗಳು, ಏರಿಳಿತದ ಹಾದಿ, ಅರಣ್ಯ ಪ್ರದೇಶ,ಸುತ್ತಲೂ ಬೆಳೆದಿರುವ ಮುಳಿಹುಲ್ಲು, ಪೊದೆಗಳು ಅಲ್ಲಲ್ಲಿ ಹರಿಯುವ ನೀರು, ಇಂಬಳಗಳ ಕಾಟದೊಂದಿಗೆ ಚಾರಣ ನಡೆಸಿ ಆಕರ್ಷಕವಾದ ಬಂಡಾಜೆ ಜಲಪಾತವನ್ನು ತಲುಪಬಹುದು.

ರಮಣೀಯವಾದ ಈ ಜಲಪಾತ ವೀಕ್ಷಣೆಗೆ ತೆರಳುವ ವೇಳೆ ಕಾಡಾನೆ ಸಹಿತ ಇತರ ವನ್ಯಜೀವಿಗಳು ಎದುರಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಅತಿ ಅಗತ್ಯ. ಈ ದಾರಿಯಲ್ಲಿ ತೆರಳುವ ವೇಳೆ ಸಾಕಷ್ಟು ಸರಿಸೃಪಗಳು ಕಂಡು ಬರಬಹುದು.

ಜಲಪಾತಕ್ಕೆ ತೆರಳುವ ದಾರಿಯ ಮಾಹಿತಿ ಇರುವ ಸ್ಥಳೀಯರು ಜತೆಗಿದ್ದರೆ ತಲುಪುವುದು ಸುಲಭ.ಚಾರಣದ ವೇಳೆ ಒಂದಿಷ್ಟು ದಾರಿ ತಪ್ಪಿದರೂ ಯಾವುದೇ ಮೊಬೈಲ್ ನೆಟ್ವರ್ಕ್ ಇಲ್ಲದ ಈ ಪರಿಸರದಲ್ಲಿ ಅಲೆಯ ಬೇಕಾಗಬಹುದು. ಈ ಹಿಂದೆ ಇಂತಹ ಹಲವಾರು ಪ್ರಕರಣಗಳು ನಡೆದಿವೆ.ಚಾರ್ಮಾಡಿ ಗ್ರಾಮ ವ್ಯಾಪ್ತಿಯಲ್ಲಿರುವ ಈ ಜಲಪಾತಕ್ಕೆ ಕೊಟ್ಟಿಗೆಹಾರದ ಮೂಲಕವೂ ಹೋಗಬಹುದು. ಈ ಭಾಗದಿಂದ ಯಾವುದೇ ಪ್ರವೇಶ ನಿಷೇಧ ಇರಲಿಲ್ಲವಾದ ಕಾರಣ ಇಲ್ಲಿಗೆ ಸಾಕಷ್ಟು ಮಂದಿ ಬರುತ್ತಿದ್ದಾರೆ.ಆದರೆ ಕಡಿರುದ್ಯಾವರದ ಮೂಲಕ ಚಾರಣ ನಡೆಸಿ ಜಲಪಾತ ವೀಕ್ಷಿಸುವ ಆನಂದ ಇಲ್ಲಿ ಸಿಗುವುದು ಕಡಿಮೆ.

ಮುನ್ನೆಚ್ಚರಿಕೆ ಅಗತ್ಯ: ಜಲಪಾತಕ್ಕೆ ಚಾರಣ ನಡೆಸುವ ವೇಳೆ ಅಗತ್ಯ ಆಹಾರ ಕೊಂಡೊಯ್ಯಬೇಕು. ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವನ್ಯಜೀವಿಗಳಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ಅನಗತ್ಯವಾಗಿ ನೀರಿಗೆ ಇಳಿಯುವುದು,ಕಲ್ಲು ಬಂಡೆ ಏರುವುದು ಮಾಡಬಾರದು.  ಜಾರುವ ಕಲ್ಲು, ಆಳವಾದ ನೀರಿನ ಹೊಂಡಗಳ ಬಳಿ ಜಾಗೃತೆ ಅಗತ್ಯ.ಅರಣ್ಯ ಪರಿಸರದಲ್ಲಿ ಬೆಂಕಿ ಹಾಕುವುದನ್ನು ನಿಷೇಧಿಸಲಾಗಿದೆ. ಸ್ಥಳೀಯ ಪರಿಚಯ ಇರುವವರು ಜತೆಗಿದ್ದರೆ ಉತ್ತಮ.ಸಂಜೆ ಬಳಿಕ ಚಾರಣಕ್ಕೆ ಅವಕಾಶ ಇರುವುದಿಲ್ಲ ಇತ್ಯಾದಿ ವಿಚಾರಗಳನ್ನು ಪರಾಮರ್ಶಿಸಿ ಚಾರಣಕ್ಕೆ ಸಿದ್ಧಗೊಳ್ಳಬೇಕಿದೆ.ಬಂಡಾಜೆ ಜಲಪಾತ ಚಾರಣಕ್ಕೆ ತೆರೆಯಲಿದ್ದು ಕಾಡ್ಗಿಚ್ಚು ಅಥವಾ ಇನ್ನಿತರ ಅಪಾಯಕಾರಿ ಸನ್ನಿವೇಶಗಳು ಎದುರಾದಲ್ಲಿ ಮತ್ತೆ ನಿಷೇಧ ಹೇರುವ ಸಾಧ್ಯತೆಯೂ ಇದೆ.

ಚಾರಣಿಗರಿಗೆ ಅನ್ ಲೈನ್ ಬುಕ್ಕಿಂಗ್ ಕಡ್ಡಾಯ: ಚಾರಣಕ್ಕೆ ಬರುವ ಮಂದಿ ಅರಣ್ಯ ಇಲಾಖೆಯ  ವೆಬ್ ಸೈಟ್ ನಲ್ಲಿ ನೋಂದಾವಣೆ ಮಾಡುವುದು ಕಡ್ಡಾಯ. ನೋಂದಾವಣೆ ಮಾಡದೆ ಬರುವ ಮಂದಿಗೆ ಪ್ರವೇಶಾವಕಾಶ ಇರುವುದಿಲ್ಲ.ಚಾರಣಿಗರು ಇಲಾಖೆ ಸೂಚಿಸುವ ಎಲ್ಲಾ ನಿಯಮಗಳನ್ನು ಪಾಲಿಸಿ ಮುಂದುವರಿಯಬೇಕು ಎಂದು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಆರ್.ಎಫ್.ಓ ಶರ್ಮಿಷ್ಠಾ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!