ಉಡುಪಿ; ಹಿಂದೂ ಸಂಸ್ಕೃತಿಗೆ ಮಾರು ಹೋಗಿ ಫ್ರಾನ್ಸ್ ನ ಜೋಡಿ ಕೊಲ್ಲೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಫ್ರಾನ್ಸ್ ನ ‘ನರೋತ್ತಮ್ ದಾಸ್’ ಮತ್ತು ‘ಜಾಹ್ನವ’ ಭಾರತದ ಆಧ್ಯಾತ್ಮಕ್ಕೆ ಮನಸೋತು ಕೊಲ್ಲೂರಿನಲ್ಲಿ ಮದುವೆಯಾಗಿದ್ದಾರೆ.
ಈ ಜೋಡಿ ಶ್ರೀಕೃಷ್ಣ ದೇವರ ಭಕ್ತರಾಗಿದ್ದು, ದೇಶದ ಅನೇಕ ಧಾರ್ಮಿಕ ಕೇಂದ್ರಗಳನ್ನು ಭೇಟಿ ಮಾಡಿದ್ದಾರೆ. ಈ ಜೋಡಿ ಅನೇಕ ವರ್ಷಗಳಿಂದ ಬೃಂದಾವನದಲ್ಲಿ ಶಾಸ್ತ್ರ ಅಧ್ಯಯನದಲ್ಲಿ ತೊಡಗಿದ್ದರು. ಒಡಿಸ್ಸಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಆಯುರ್ವೇದದ ಮೇಲಿನ ವಿಶ್ವಾಸದೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಕೊಲ್ಲೂರಿನ ಅಭಯ ಆಯುರ್ವೇದ ಚಿಕಿತ್ಸಾಲಯದಲ್ಲಿ ಪಂಚಕರ್ಮ ಚಿಕಿತ್ಸೆಗೆ ಬರುತ್ತಿದ್ದರು. ನರೋತ್ತಮ ದಾಸ್ ಮತ್ತು ಜಾಹ್ನವ ನನ್ನ ಜೊತೆ ಚರ್ಚಿಸಿ ಭಾರತೀಯ ಸಂಸ್ಕೃತಿಯ ಪ್ರಕಾರ ಮದುವೆಯಾಗುವ ಬಗ್ಗೆ ಇಚ್ಚೆ ವ್ಯಕ್ತಪಡಿಸಿದ್ದರು. ವೈದಿಕರಾದ ಶ್ಯಾಮಸುಂದರ ಅಡಿಗ ಮರವಂತೆ ಅವರ ತಂಡದವರೊಂದಿಗೆ ವಿವಾಹ ಕಾರ್ಯಕ್ರಮವನ್ನು ಶಾಸ್ತ್ರೀಯವಾಗಿ ನೆರವೇರಿಸಲಾಯಿತು.
ಇಲ್ಲಿನ ದಳಿ ಎಂಬ ಸುಂದರ ಪರಿಸರದಲ್ಲಿ ದೇವ ದ್ವಿಜ ಅಗ್ನಿ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಸರಳ ವಿವಾಹವಾದರು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸರಳವಾಗಿ ಆರತಕ್ಷತೆ ನಡೆಸಿ, ಸಂಗೀತ ಕಾರ್ಯಕ್ರಮವನ್ನೂ ಇವರು ಆಯೋಜಿಸಿದ್ದರು.


