Tuesday, June 9, 2026
Homeಕರಾವಳಿಮಂಗಳೂರುಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಪುತ್ತೂರು ಶಾಖೆಯಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ...

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಪುತ್ತೂರು ಶಾಖೆಯಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚನೆ

- Advertisement -
- Advertisement -

ಪುತ್ತೂರು: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಪುತ್ತೂರು ಶಾಖೆಯಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚನೆ ಎಸಗಿರುವ ಘಟನೆ ನಡೆದಿದೆ. ಈ ಬಗ್ಗೆ  ಶಾಖೆಯ ಮ್ಯಾನೇಜ‌ರ್ ಪವಿತ್ರ ಎನ್. ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಬ್ದುಲ್ ರಮೀಜ್ ವಂಚಿಸಿರುವ ಆರೋಪಿ.

ಅಬ್ದುಲ್ ರಮೀಜ್ ಎಂಬಾತ ಎರಡು ಬಾರಿ ಸಹಕಾರಿ ಸಂಘದ ಪುತ್ತೂರು ಶಾಖೆಗೆ ಬಂದು ಒಟ್ಟು 104.170 ಗ್ರಾಂ ಚಿನ್ನಾಭರಣ ಅಡವಿಟ್ಟು 9,25,000 ರೂ. ಸಾಲವಾಗಿ ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಅ.4ರಂದು ಶಾಖೆಗೆ ಬಂದ ಅಬ್ದುಲ್ ರಮೀಜ್ 17.100 ಗ್ರಾಂ ತೂಕದ 1 ಚಿನ್ನದ ಬ್ರಾಸ್ಕೆಟ್ ಮತ್ತು 34.390 ಗ್ರಾಂ ತೂಕದ 2 ಚೈನ್ ನೀಡಿದ್ದ. ಶಾಖೆಯಲ್ಲಿ ಚಿನ್ನ ಪರೀಕ್ಷಿಸುವ ಸುಭಾಷ್ ರೈ ಅವರನ್ನು ಬರಮಾಡಿಕೊಂಡು ಚಿನ್ನ ಪರಿಶೀಲಿಸಿದ ಪ್ರಕಾರ ಈ ಚಿನ್ನಾಭರಣಕ್ಕೆ 4,50,000 ರೂ. ಸಾಲ ಮಂಜೂರು ಮಾಡಿದ್ದರು. 1,99,000 ರೂ. ನಗದು ರೂಪದಲ್ಲಿ ನೀಡಿ, ಉಳಿದ 2,51,000 ರೂ.ಗಳನ್ನು ಆತನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು.

ಅ.8ರಂದು ಮತ್ತೊಮ್ಮೆ ಬಂದ ಅಬ್ದುಲ್ ರಮೀಜ್ 52.870 ಗ್ರಾಂ ತೂಕದ ಚಿನ್ನಾಭರಣ ತಂದಿದ್ದ. ಇದರಲ್ಲಿ 1 ಜತೆ ಚಿನ್ನದ ಕಾಲು ಚೈನ್ ಮತ್ತು ಒಂದು ಚಿನ್ನದ ಚೈನ್ ಇತ್ತು. ಇದನ್ನು ಕೂಡ ಸುಭಾಷ್ ರೈ ಮೂಲಕ ಪರಿಶೀಲಿಸಿ 4,75,000 ರೂ. ಸಾಲ ಮಂಜೂರು ಮಾಡಿದ್ದರು. ಇದರಲ್ಲಿ 1,99,000 ರೂ. ನಗದು ರೂಪದಲ್ಲಿಯೂ, 2,67,000 ರೂ.ಗಳನ್ನು ಆತನ ಬ್ಯಾಂಕ್ ಖಾತೆಗೂ ವರ್ಗಾಯಿಸಿದ್ದರು.

ಅ.13ರಂದು ಪತ್ರಿಕೆಗಳಲ್ಲಿ ಅಬ್ದುಲ್ ರಮೀಜ್ ಮತ್ತು ಇತರರು ಸೇರಿಕೊಂಡು ಮಂಗಳೂರಿನಲ್ಲಿ ನಕಲಿ ಚಿನ್ನಾಭರಣ ಅಡವಿರಿಸಿ ಬೇರೊಂದು ಸಹಕಾರಿ ಸಂಘಕ್ಕೆ ವಂಚನೆ ಮಾಡಿದ ಸುದ್ದಿ ಓದಿದಾಗ ಸಂಶಯಗೊಂಡ ಶಾಖಾ ಮ್ಯಾನೇಜ‌ರ್, ಕೇಂದ್ರ ಕಚೇರಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಒಪ್ಪಿಗೆ ಪಡೆದು ಅಬ್ದುಲ್ ರಮೀಜ್ ಅಡಮಾನ ಇರಿಸಿದ್ದ ಎಲ್ಲ ಚಿನ್ನಾಭರಣಗಳನ್ನು ಮಂಗಳೂರಿನ ಟೆಸ್ಟಿಂಗ್ ಸೆಂಟರ್‌ನಲ್ಲಿ ಪರಿಶೀಲನೆಗೆ ಒಳಪಡಿಸಿದಾಗ ಅವೆಲ್ಲವೂ ನಕಲಿ ಎಂಬುದು ತಿಳಿದುಬಂದಿದೆ. ಶಾಖಾ ಮ್ಯಾನೇಜರ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಕಾವೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಅಬ್ದುಲ್ ರಮೀಜ್ ಮತ್ತು ಇತರರು ಇದೇ ರೀತಿ ನಕಲಿ ಚಿನ್ನ ಅಡವಿಟ್ಟು ವಂಚಿಸಿದ ಬಗ್ಗೆ ಇತ್ತೀಚೆಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ‌ಚಿನ್ನದಂತೆ ತೋರುವ ನಕಲಿ ಚಿನ್ನವನ್ನು ಅಡವಿರಿಸಿ ವಂಚಿಸುವ ಜಾಲ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕವಾಗಿದ್ದು ಕಳೆದ ಎರಡು ವರ್ಷಗಳಲ್ಲಿ ಕೊಡಗು ಸೇರಿ ಹಲವಾರು ಕಡೆ ವಂಚನೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!