ಬಂಟ್ವಾಳ: ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ತಾಲೂಕಿನ ಸಹಕಾರ ಭಾರತಿಯ ಸಭೆಯು ಅ. 15ನೇ ಬುಧವಾರದಂದು ನಡೆಯಿತು.
ನೇರಳೆ ಕಟ್ಟೆ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪುಷ್ಪರಾಜ ಚೌಟ ಅವರು ಬಂಟ್ವಾಳ ಸಹಕಾರ ಭಾರತಿಯ ನೂತನ ಅಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಬಂಟ್ವಾಳ ಸಮಾಜಸೇವಾ ಬ್ಯಾಂಕಿನ ನಿರ್ದೇಶಕ ಅರುಣ್ ಕುಮಾರ್ ಸಜಿಪ ಅವರು ಆಯ್ಕೆಯಾದರು.
ತಾಲೂಕು ಮಹಿಳಾ ಪ್ರಮುಖರಾಗಿ ಪುದು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾದ ಶಾಂತಾ ಚೌಟರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದಿಕ್ಕೂಚಿ ಭಾಷಣ ಮಾಡಿದ ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು, “ಕಳೆದ 46 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ದೇಶದ ಏಕೈಕ ಸರಕಾರೇತರ ಸ್ವಯಂ ಸೇವಾ ಸಂಸ್ಥೆಯಾಗಿ, ಸಂಘಟನಾತ್ಮಕವಾಗಿ ದೇಶದ 650 ಜಿಲ್ಲೆಗಳಲ್ಲಿ ಮತ್ತು ಕರ್ನಾಟಕ ರಾಜ್ಯದ 32 ಜಿಲ್ಲೆ ಮತ್ತು 3 ಮಹಾನಗರಗಳಲ್ಲಿ ಸಹಕಾರಿ ಸಂಘಗಳ ಶ್ರಯೋಭಿವೃದ್ಧಿಗಾಗಿ ಸಕ್ರಿಯವಾಗಿದೆ. ಬಂಟ್ವಾಳ ತಾಲೂಕಿನಲ್ಲಿ ರಚನೆಯಾಗಿರುವ ನೂತನ ಸಮಿತಿಯ ಪದಾಧಿಕಾರಿಗಳು ಸರ್ವ ವ್ಯಾಪಿ ಸರ್ವಸ್ಪರ್ಶಿಯಾಗಿ ಸಂಘಟನಾತ್ಮಕ ಚಟುವಟಿಕೆಗಳನ್ನು ಮುನ್ನಡೆಸಬೇಕು ಎಂದು,” ಹೇಳಿದರು.
ಸಭೆಯಲ್ಲಿ ಸಹಕಾರ ಭಾರತಿಯ ಪ್ರಧಾನ ರಾಜ್ಯ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ದ.ಕ ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷ ಬಿ ಸುಧಾಕರ ರೈ, ಬೋಳಂತೂರು ಹಾಗೂ ಜಿಲ್ಲಾ ಮಹಿಳಾ ಪ್ರಮುಖರಾದ ಸುಭದ್ರ ರಾವ್ ಭಾಗವಹಿಸಿದ್ದರು.
ವಿಶ್ವನಾಥ ಎಂ ಕಾರ್ಯಕ್ರಮ ನಿರೂಪಿಸಿ, ನೂತನ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ರವರು ವಂದನಾರ್ಪಣೆಗೈದರು.


