ಧರ್ಮಸ್ಥಳ: ಭಗವಂತನ ನಾಮ ಜಪವೇ ಶ್ರೇಷ್ಠವಾದ ಭಾಗ್ಯ ಎಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಶುಭಾ ಮರವಂತೆ ಅಭಿಪ್ರಾಯಪಟ್ಟರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 17ನೇ ವರ್ಷದ ಭಜನಾ ತರಬೇತಿ ಕಮ್ಮಟದ 3ನೇ ದಿನದ ಕಾರ್ಯಾಗಾರದಲ್ಲಿ ‘ದೈನಂದಿನ ಜೀವನದಲ್ಲಿ ಭಜನೆಯ ಮಹತ್ವ’ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು.
ಸಮಾಜದಲ್ಲಿ ಸಾಮರಸ್ಯ ಮೂಡಿಸಬಲ್ಲ ಶಕ್ತಿ ಭಜನೆಗಿದೆ. ಭಜನೆ ಮಾಡುವುದು ಒಳ್ಳೆತನದ ಉಳಿವಿಗಾಗಿ ಹಾಗೂ ಮನಸನ್ನು ಸ್ವಸ್ಥ ಮತ್ತು ಸ್ವಚ್ಛವಾಗಿಸುವುದಕ್ಕಾಗಿ ಭಜನೆ ಎಂಬುದು ಇಂದಿನ ಪರಿಕಲ್ಪನೆಯಲ್ಲ ಅದಕ್ಕೆ 6 ಶತಮಾನಗಳಷ್ಟು ಇತಿಹಾಸವಿದೆ ಎಂದು ಹೇಳಿದರು.
ಭಜನೆ ಪದದ ‘ಭ’ ಅಕ್ಷರ ಭಗವಂತ ಎಂಬುದನ್ನು ಸೂಚಿಸಿದರೆ, ‘ಜ’ಎಂಬುದು ಜನ್ಮಾಂತರಗಳ ಪಾಪ ನಾಶ ಹಾಗೂ ‘ನೆ’ ಎಂದರೆ ಭಗವಂತನಲ್ಲಿ ನೆಲೆಯಾಗುವುದು ಎಂಬುದನ್ನು ಸೂಚಿಸುತ್ತದೆ. ಭಗವಂತನ ಸ್ಮರಣೆ ಶ್ರೇಷ್ಠವಾದ ಭಾಗ್ಯ ಭಗವಂತನಿಗೆ ಪ್ರಿಯನಾಗಲು ಭಜನೆ ಒಂದೇ ದಾರಿ. ಭಗವಂತನಿಗೆ ಸಂಪೂರ್ಣ ಶರಣಾದರೆ ಮನಸ್ಸು ಮತ್ತು ದೇಹ ಹಗುರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂದು ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಸ್ವಸ್ಥ ಮಾನಸಿಕತೆಯ ಕೊರತೆಯಂತಹ ಸಮಸ್ಯೆ ಹೆಚ್ಚಾಗಿ ಉಂಟಾಗುತ್ತಿದೆ. ಇಂತಹ ಒತ್ತಡಗಳ ನಿವಾರಣೆಯ ಸೂತ್ರವೇ ಭಜನೆ. ಪ್ರತಿಯೊಂದು ಭಜನೆ ಮತ್ತು ಶ್ಲೋಕಗಳಿಗೆ ಅದರದೇಯಾದ ಸ್ವರಭಾರವಿದೆ ಅದನ್ನು ಕೆಡಿಸದೆ ವಾಕ್ಯುದ್ಧಿ ಕಾಪಾಡಿಕೊಳ್ಳಬೇಕು. ಶಬ್ದವೇ ಜಗತ್ತನ್ನು ಆವರಿಸುವ ಆಧ್ಯಾತ್ಮಿಕ ಶಕ್ತಿಯೇ ಭಜನೆ ಒಂದೇ ಮನಸ್ಸಿನಿಂದ ಭವಂತನ ಸ್ಮರಣೆ ಮಾಡಿದರೆ ಹೃದಯ ಪರಿಶುದ್ಧಗೊಳ್ಳುತ್ತದೆ.ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರೀ ಕ್ಷೇತ್ರದ ಪಾತ್ರ ಮಹತ್ವದ್ದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ. ಹರೀಶ್ ಕುಮಾರ್ ಗೌರವ ಉಪಸ್ಥಿತಿ ವಹಿಸಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಪಾಧ್ಯಕ್ಷ ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತಿರಿದ್ದರು. ಶ್ರೀಧಾಮಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯಸಾನಿದ್ಯ ವಹಿಸಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಬಸೂರು, ಇವರು ಉಪಸ್ಥಿತರಿದ್ದರು. ಪದ್ಮರಾಜ್ ಜೈನ್, ಕೋಶಾಧಿಕಾರಿ, ಭಜನಾ ಕಮ್ಮಟ ಹಾಗೂ ಸಮನ್ವಯಾಧಿಕಾರಿಗಳಾದ ಶ್ರೀ ಸಂತೋಷ್ ಪಿ, ಅಳಿಯೂರು ಇವರು ಕಾರ್ಯಕ್ರಮ ನಿರ್ವಹಿಸಿದರು.


