ನವದೆಹಲಿ: ದೇಶದ 15ನೇ ಉಪರಾಷ್ಟ್ರಪತಿಯಾಗಿ ಚಂದ್ರಪುರಂ ಪೊನ್ನಸ್ವಾಮಿ ರಾಧಾಕೃಷ್ಣನ್(ಸಿ.ಪಿ.ರಾಧಾಕೃಷ್ಣನ್) ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.
ನೂತನ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದ ಐತಿಹಾಸಿಕ ದರ್ಬಾರ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಗೌಪ್ಯತೆ ಬೋಧಿಸಿದರು.
ಈ ಮೂಲಕ ರಾಧಾಕೃಷ್ಣನ್ ಅವರು ದೇಶದ 2ನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ತಮಿಳುನಾಡಿನ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಆರ್.ವೆಂಕಟರಾಮನ್ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದರು. ಇಬ್ಬರೂ ತಮಿಳುನಾಡಿನವರೇ ಆಗಿದ್ದರು. ಕೆಲವೇ ನಿಮಿಷಗಳವರೆಗೆ ನಡೆದ ಸಮಾರಂಭದಲ್ಲಿ ಮಾಜಿ ಉಪರಾಷ್ಟ್ರಪತಿಗಳಾದ ವೆಂಕಯ್ಯ ನಾಯ್ಡು, ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಜೆ.ಪಿ.ನಡ್ಡ, ಲೋಕಸಭೆ ಸ್ಪೀಕರ್ ಓಂಬಿರ್ಲಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಪ್ರತಿಪಕ್ಷಗಳ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಬಹುತೇಕ ನಾಯಕರು ಗೈರು ಹಾಜರಾಗಿದ್ದರು.


