Tuesday, April 30, 2024
Homeಕ್ರೀಡೆಭಾರತದ ಕಬಡ್ಡಿ ಅಂಕಣದಲ್ಲಿ ಹೊಳೆಯುವ ನಕ್ಷತ್ರ ಕಾರ್ಕಳದ ಸುಕೇಶ್ ಹೆಗ್ಡೆ

ಭಾರತದ ಕಬಡ್ಡಿ ಅಂಕಣದಲ್ಲಿ ಹೊಳೆಯುವ ನಕ್ಷತ್ರ ಕಾರ್ಕಳದ ಸುಕೇಶ್ ಹೆಗ್ಡೆ

spot_img
- Advertisement -
- Advertisement -

ಲೇಖನ : ಸಹನ್ ರೈ ಬಾಳಿಲ

ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶ ಹಲವು ಸಂಸ್ಕೃತಿ, ಆಚಾರ ವಿಚಾರ,ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರದ ಜೊತೆಗೆ ಕ್ರೀಡಾಕ್ಷೇತ್ರದಲ್ಲೂ ತನ್ನ ವಿವಿಧತೆಯನ್ನು ತೋರಿಸುತ್ತಿದೆ. ಕ್ರೀಡಾ ಕ್ಷೇತ್ರವೆಂಬುದು ಹಲವು ಕ್ರೀಡೆಗಳ ಹಾಗೂ ಹಲವು ಕ್ರೀಡಾಪಟುಗಳ ಸಮಾಗಮ ಇಂತಹ ವಿಶೇಷ ಕ್ಷೇತ್ರಗಳಲ್ಲಿ ವಿರಾಜಮಾನವಾಗಿ ಬೆಳೆಯುತ್ತಿರುವ ನಮ್ಮ ದೇಶೀಯ ಅಪ್ಪಟ ಮಣ್ಣಿನ ಕ್ರೀಡೆ ಕಬಡ್ಡಿ.ಇಂತಹ ಮಣ್ಣಿನ ಸೊಗಡಿನ ಕಬಡ್ಡಿಯಲ್ಲಿ ಆಸಕ್ತಿ ಬೆಳೆಸಿಕೊಂಡು ಕಠಿಣ ಪರಿಶ್ರಮದಿಂದ ರಾಜ್ಯ, ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರುತ್ತಿರುವ ಸಾಧನೆಗಳ ಸರದಾರ ಹೆಮ್ಮೆಯ ಕಬಡ್ಡಿ ಪೈಲ್ವಾನ್ ನಮ್ಮ ಹಳ್ಳಿಯ ಪ್ರತಿಭೆ ಕರಾವಳಿ ಏಕಲವ್ಯ ಭಾರತ ತಂಡದ ಪ್ರತಿನಿಧಿ ಸುಕೇಶ್ ಹೆಗ್ಡೆ.

ನಮ್ಮ ಕರಾವಳಿಯ ಹೆಮ್ಮೆಯ ಈ ಕಬಡ್ಡಿ ಸಾಧಕ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಡ್ತಲದ ನಿವಾಸಿ ದಿ. ಕರುಣಾಕರ್ ಹೆಗ್ಡೆ ಹಾಗೂ ರತ್ನಾವತಿ ಹೆಗ್ಡೆ ದಂಪತಿಗಳ ಸುಪುತ್ರ.ತನ್ನ ಕಬಡ್ಡಿಯ ಕೌಶಲ್ಯದಿಂದ ದೇಶ ವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಪಡೆದುಕೊಂಡು ಕಬಡ್ಡಿ ವೀರನಾಗಿ ಮೆರೆಯುತ್ತಿರುವ ಈ ಪ್ರತಿಭೆ ತನ್ನ ಪ್ರಾಥಮಿಕ  ಹಾಗೂ ಪ್ರೌಢ ಶಿಕ್ಷಣವನ್ನು ತನ್ನ ಹುಟ್ಟೂರಲ್ಲೇ ಮುಗಿಸುವುದರ ಜೊತೆಗೆ  ಕಬಡ್ಡಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವರು.ಕಲಿಕೆಯಲ್ಲಿನ ನಿರಾಸಕ್ತಿಯಿಂದ ಅತಿ ಕಡಿಮೆ ಖರ್ಚಿನ ತನ್ನಿಷ್ಟದ  ಕಬಡ್ಡಿಯನ್ನು ಜೀವಾಳವಾಗಿರಿಸಿಕೊಂಡು ಮನೆಯ ಬಡತನದ ಜೊತೆಗೆ ತಾಯಿಯ ಆರೈಕೆಗೆ ಸ್ಪಂದಿಸುತ್ತಾ ಸಣ್ಣ ಪುಟ್ಟ ಕೆಲಸಗಳ ಮುಖಾಂತರ ಸಂಪಾದನೆ ಮಾಡಿ ತನ್ನ ಖರ್ಚನ್ನು ತಾನೇ ನಿಭಾಯಿಸಿಕೊಂಡು ಕಬಡ್ಡಿ ಆಟವಾಡುತ್ತಾ ತಕ್ಕ ಮಟ್ಟಿಗೆ ವಿದ್ಯಾಭ್ಯಾಸವನ್ನು ಮುಗಿಸುತ್ತಾ  ಸಾಧಕನಾದ ಈ ಹಳ್ಳಿ ಪ್ರತಿಭೆ ಇಂದು ನಮ್ಮೆಲ್ಲರಿಗೂ ಸ್ಪೂರ್ತಿ.

ಕಬಡ್ಡಿಯ ಆಸಕ್ತಿಯಿಂದ ಪ್ರತಿಭೆಯಿಂದ ತನ್ನಾಸೆಯ ಆಳ್ವಾಸ್ ವಿದ್ಯಾಸಂಸ್ಥೆಗೆ ಸಿಕ್ಕಿದ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಂಡು  ತನ್ನ ಬೆಳವಣಿಗೆಗೆ ಕಾರಣೀಕರ್ತರಾದ ಪ್ರತಿಯೊಬ್ಬರನ್ನು ಸ್ಮರಿಸಿಕೊಳ್ಳುವ ಈ ಸಾಧಕ ಆಳ್ವಾಸ್ ಕಬಡ್ಡಿ ತಂಡದ ಜೊತೆಗೆ ಹಲವು ಪಂದ್ಯಾಟಗಳಲ್ಲಿ ಮಿಂಚು ಹರಿಸಿ ಕರ್ನಾಟಕದ ಪ್ರತಿಷ್ಠಿತ ತಂಡಗಳಲ್ಲೊಂದಾದ H.M.T ಸಹಿತ ಹಲವು ತಂಡಗಳ ಜೊತೆ ಅತಿಥಿ ಆಟಗಾರನಾಗಿ  ತನ್ನ ಅದ್ಬುತ ಪ್ರದರ್ಶನ ನೀಡುತ್ತಾ ಕಬಡ್ಡಿ ಅಂಕಣದಲ್ಲಿ ದಾಖಲೆ ಮೆರೆಯುತ್ತಿರುವ ಕಬಡ್ಡಿ ಕಿಲಾಡಿ ಪ್ರಥಮ ವರ್ಷದ ಪದವಿಯಲ್ಲಿರುವಾಗಲೇ ಮಂಗಳೂರು ವಿಶ್ವವಿದ್ಯಾಲಯ ಕಬಡ್ಡಿ ತಂಡಕ್ಕೆ ಆಯ್ಕೆಗೊಂಡು ಸೌತ್ ಝೋನ್ ಕಬಡ್ಡಿ ಪಂದ್ಯಾಟದ ಹಾಗೂ ಹಲವು ವರುಷಗಳಿಂದ ಕನಸಾಗಿ ಉಳಿದಿದ್ದ ಆಲ್ ಇಂಡಿಯಾ ಯುನಿವರ್ಸಿಟಿ ಕಬಡ್ಡಿ ಚಾಪಿಂಯನ್ ಶಿಪ್ ನಲ್ಲಿ ಪದಕಕ್ಕೆ ಕೊರಳೊಡ್ಡಿದ ಹೆಮ್ಮೆಯ ಆಟಗಾರನೆಂಬ ಹಿರಿಮೆ ನಮ್ಮ ಸುಕೇಶ್ ಹೆಗ್ಡೆಯವರದ್ದು .

ಕಬಡ್ಡಿ ಕ್ಷೇತ್ರದಲ್ಲಿ ಸಾಧನೆಗಳನ್ನು ತೋರುತ್ತಾ ಮುನ್ನಡೆಯುತ್ತಿದ್ದ ಈ ಕಡ್ತಲದ ಕುವರನ ಪಾಲಿಗೆ  ದ್ವಿತೀಯ ವರ್ಷದ ಪದವಿಯ ಅರ್ಧದಲ್ಲಿರುವಾಗಲೇ  ಬಾಗಿಲು ತೆರೆದದ್ದು ಪ್ರಸ್ತುತ ಬ್ಯಾಂಕ್ ಆಫ್ ಬರೋಡಾ ಹೆಸರಿನಲ್ಲಿ ಕಾರ್ಯಚರಿಸುತ್ತಿರುವ ಕರಾವಳಿಯ ಹೆಮ್ಮೆಯ ವಿಜಯಾ ಬ್ಯಾಂಕ್. ಈ ಪ್ರತಿಷ್ಠಿತ ಬ್ಯಾಂಕಿನಲ್ಲಿ ಉದ್ಯೋಗದ ಜೊತೆಗೆ ಕಬಡ್ಡಿ ತಂಡದಲ್ಲಿ ಅವಕಾಶ ಪಡೆದುಕೊಂಡು ಕಬಡ್ಡಿ ತಂಡದೊಳಗೆ ನಿಧಾನವಾಗಿ ತನ್ನ ನಿಲುವನ್ನು ಕಂಡುಕೊಂಡು ಇದೀಗ ವಿಜಯ ರತ್ನವಾಗಿ ಮಿನುಗುತ್ತಿರುವ ನಮ್ಮ ಕಬಡ್ಡಿ ಸಾಧಕ 2013 ನೇ ಸಾಲಿನ ಇಂಡಿಯಾ ಸೌತ್ ಝೋನ್ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಹಾಗೂ 61ನೇ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ವಿಜೇತರು.

2014-15ರಲ್ಲಿ ನಡೆದ ಸೌತ್ ಇಂಡಿಯಾ ಕಬಡ್ಡಿ ಲೀಗ್ ನಲ್ಲಿ ಚಿನ್ನದ ಪದಕದ ಜೊತೆಗೆ ರೈಡರ್ ಆಫ್ ಟೂರ್ನಮೆಂಟ್ ಗೌರವವನ್ನು ಪಡೆದುಕೊಂಡ ಈ ಕಬಡ್ಡಿ ಮಾಣಿಕ್ಯ 2013 ರಿಂದ ಇಲ್ಲಿಯ ತನಕ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್ ನ ಕರ್ನಾಟಕ ತಂಡದ ಪ್ರತಿನಿಧಿ ಕರ್ನಾಟಕ ರಾಜ್ಯ ಕಬಡ್ಡಿ ತಂಡ ಬ್ಯಾಂಕ್ ಆಫ್ ಬರೋಡಾ ಕಬಡ್ಡಿ ತಂಡದಲ್ಲಿ ಸಾಧನೆಗಳನ್ನು ತೋರುತ್ತಿರುವ ನಮ್ಮ ಕಬಡ್ಡಿ ರತ್ನ ನ ದೊಡ್ಡ ಕನಸು ಭಾರತ ತಂಡದ ಅಶೋಕ ಚಕ್ರವಿರುವ ಜರ್ಸಿ ಧರಿಸುವುದು ಅದಕ್ಕಾಗಿ ಕಠಿಣ ಶ್ರಮವನ್ನೇ ಬಂಡವಾಳವಾಗಿರಿಸಿಕೊಂಡು ತನ್ನ ಸತತ ಪರಿಶ್ರಮದಿಂದ  2014ರಿಂದ ಸತತ 4 ವರ್ಷಗಳ ಕಾಲ ಭಾರತ ಕಬಡ್ಡಿ ತಂಡದ ಏಷಿಯನ್ ಗೇಮ್ಸ್  ಕ್ಯಾಂಪ್ ನಲ್ಲಿ ಭಾಗವಹಿಸಿ 2014ರಲ್ಲಿ ಥಾಯ್ಲೆಂಡ್ ನಲ್ಲಿ ನಡೆದ ನಾಲ್ಕನೇ ಬೀಚ್ ಏಷ್ಯೀಯನ್ ಕಬಡ್ಡಿ ಪಂದ್ಯಾಟದಲ್ಲಿ ಭಾರತ ತಂಡದ ಪರ ಮೊದಲ ಬಾರಿಗೆ ರೈಡ್  ಮಾಡಿದ ನಮ್ಮ ರೈಡಿಂಗ್ ಮಿಷನ್ 2016ರಲ್ಲಿ ನಡೆದ 12ನೇ ಸೌತ್ ಏಷಿಯನ್ ಗೇಮ್ಸ್ ನಲ್ಲಿ ಭಾರತ ತಂಡದ ಪರ ಚಿನ್ನದ ಪದಕ ವಿಜೇತ ಭಾರತ ತಂಡದ ಆಟಗಾರ.

ಕಬಡ್ಡಿಯ ನಾಮಜಪದಲ್ಲಿ ಸಾಧನೆಗಳನ್ನು ಮಾಡಿ ಅಭಿಮಾನಿ ಸಾಮ್ರಾಜ್ಯ ಕಟ್ಟಿದ ಸುಕೇಶ್ ಹೆಗ್ಡೆ ಭಾರತದ ಹೆಮ್ಮೆಯ ಕ್ರೀಡೆ ಕಬಡ್ಡಿಯ ಕಡೆಗೆ ವಿಶೇಷವಾಗಿ ಗಮನ ಸೆಳೆಯುವಂತೆ ಮಾಡಿದ  ಸ್ಟಾರ್ ಸ್ಪೋರ್ಟ್ಸ್ ನವರು ಪ್ರಾರಂಭ ಮಾಡಿದ ಜಗಮೆಚ್ಚಿದ ಪ್ರೋ ಕಬಡ್ಡಿ  ಯ ಸೀಸನ್ 1ರಿಂದ 7ನೇ ಸೀಸನ್ ವರೆಗೆ ಆಯ್ಕೆಗೊಂಡು ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ ಜಂಪಿಂಗ್ ಸ್ಪೆಷಲಿಸ್ಟ್ 1 ರಿಂದ 4ನೇ ಸೀಸನ್ ತನಕ ತೆಲುಗು ಟೈಟಾನ್ಸ್ ತಂಡದ ಹೆಮ್ಮೆಯ ಆಟಗಾರ ನಂತರ ಸೀಸನ್ 2ರಲ್ಲಿ ಗುಜರಾತ್ ಫಾರ್ಚ್ಯೂನ್ ಜೈಂಟ್ಸ್ ತಂಡಕ್ಕೆ ಆಯ್ಕೆಗೊಂಡು ತಂಡದ ನಾಯಕತ್ವ ಮೆರೆದ ನಮ್ಮ ಕರುನಾಡ ಹಿರಿಮೆ ಏಳರ ಸರದಾರ ತಂಡ ರನ್ನರ್ ಅಪ್ ಆಗುವಲ್ಲಿ ವಹಿಸಿದ ಶ್ರಮ ಮೆಚ್ಚುವಂತದ್ದು ನಂತರದ ಆವೃತ್ತಿಯಲ್ಲಿ ತಮಿಳ್ ತಲೈವಾಸ್ ತಂಡಕ್ಕೆ ಆಯ್ಕೆಗೊಂಡು ಹೆಚ್ಚಿನ ಅವಕಾಶಗಳು ದೊರಕದಿದ್ದರೂ ದೊರೆತ ಅವಕಾಶದಲ್ಲಿ ತನ್ನ ವೈಯಕ್ತಿಕ ಸಾಧನೆಯನ್ನು ಮಾಡಿದ ಸಾಧಕ ಸೀಸನ್ 7ರ ಪ್ರೋ ಕಬಡ್ಡಿ ವಿನ್ನರ್ ಬೆಂಗಾಲ್ ವಾರಿಯರ್ಸ್ ನ ಬೆಂಗಾವಲಿನ ವಾರಿಯರ್.

ಕೈ ತಪ್ಪಿದ ವಿನ್ನರ್ ಪಟ್ಟವನ್ನು ಮರಳಿ ಪಡೆಯುವುದಕ್ಕಾಗಿ ಪಂದ್ಯಾಟದ ಗೇಮ್ ಚೇಂಜರ್ ಅವಾರ್ಡ್ ಜೊತೆಗೆ ಬೆಸ್ಟ್ ರೈಡರ್ ಅವಾರ್ಡ್ ಗಿಟ್ಟಿಸಿಕೊಂಡ ಈ ಕಬಡ್ಡಿ ಮಾಣಿಕ್ಯನಿಗೆ  ಇನ್ನಷ್ಟು ಹೆಚ್ಚು ಅವಕಾಶಗಳು ಒದಗಿ ಬರಲಿ.ಕಬಡ್ಡಿ ರಣಾಂಗಣದಲ್ಲಿ ಸಿಡಿಲಿನಂತೆ ಮಿಂಚಿ ಹುಲಿಯಂತೆ ಆರ್ಭಟಿಸಿ ಪ್ರಶಸ್ತಿಗಳನ್ನು ಬೇಟೆಯಾಡುವ ಸುಕೇಶ್ ಹೆಗ್ಡೆಯವರಿಗೆ ಕರ್ನಾಟಕ ಸರಕಾರ ಕಬಡ್ಡಿಯ ಸಾಧನೆಗಳಿಗಾಗಿ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಒಲಿಂಪಿಕ್ ಅವಾರ್ಡ್ ನೀಡಿ ಗೌರವಿಸಿದೆ.ಇನ್ನಷ್ಟು ಸಾಧಿಸುವ ಹಂಬಲದ ಜೊತೆಗೆ ತನ್ನಂತೆಯೇ ಕಬಡ್ಡಿಯಲ್ಲಿ ಸಾಧನೆ ಮಾಡಲು ಕನಸಿರುವ ಯುವ ಕಬಡ್ಡಿ ರತ್ನಗಳಿಗೆ ಆಸರೆಯಾಗುವ ಅಭಿಲಾಷೆ ಹೊಂದಿರುವ ಕಬಡ್ಡಿ ರತ್ನ ಸುಕೇಶ್ ಹೆಗ್ಡೆಯವರ ಕನಸುಗಳೆಲ್ಲ ನನಸಾಗಲೆಂದು ಈ ಸಂದರ್ಭದಲ್ಲಿ ಶುಭ ಹಾರೈಸುತ್ತಾ.ಸಾಧನೆಗೆ ಸತತ ಪ್ರಯತ್ನ ಆಸಕ್ತಿ ಸಾಧಿಸಿಯೇ ಸಾಧಿಸುವೆನೆಂಬ ನಂಬಿಕೆ ಸಾಧನೆಗಳಿಗೆ ಮೂಲವೆಂದು ನಂಬಿ ಸಾಧಕರಾದ ಯುವ ಮನಸ್ಸುಗಳಿಗೆ ಸ್ಪೂರ್ತಿಯ ಚಿಲುಮೆಯಾದ ಹಳ್ಳಿ ಪ್ರತಿಭೆ ನಮ್ಮೆಲ್ಲರಿಗೂ ಹೆಮ್ಮೆ.

- Advertisement -
spot_img

Latest News

error: Content is protected !!