Saturday, June 6, 2026
Homeತಾಜಾ ಸುದ್ದಿಬೈಕ್ ಗೆ ಗುದ್ದಿದ ನಟ ರಕ್ಷಕ್ ಕಾರು: ಯುವಕನಿಗೆ ಗಾಯ

ಬೈಕ್ ಗೆ ಗುದ್ದಿದ ನಟ ರಕ್ಷಕ್ ಕಾರು: ಯುವಕನಿಗೆ ಗಾಯ

- Advertisement -
- Advertisement -

ಬೆಂಗಳೂರು: ನಟ ರಕ್ಷಕ್ ಚಲಾಯಿಸುತ್ತಿದ್ದ ಕಾರು ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಮಾನ್ಯತಾ ಟೆಕ್ ಪಾರ್ಕ್‌ನ ಶಿವರಾಜ್​ಕುಮಾರ್ ಅವರ ಮನೆ ಬಳಿಯ ತಿರುವಿನಲ್ಲಿ ನಡೆದಿದೆ. ಶಿಡ್ಲಘಟ್ಟ ಮೂಲದ ಯುವಕ ವೇಣುಗೋಪಾಲ್ ಗಾಯಗೊಂಡವರು. ರಕ್ಷಕ್ ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದರಿಂದ ಡಿಕ್ಕಿ ಆಗಿದೆ ಎನ್ನಲಾಗಿದೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೇಣುಗೋಪಾಲ್ ಮತ್ತು ಸ್ನೇಹಿತೆ ಬೈಕ್​ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ರಕ್ಷಕ್‌ ಮಾಡಿದ ಎಡವಟ್ಟಿನಿಂದ ಯುವಕನ ಕಾಲು ಮುರಿದಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕಾರು, ಬೈಕ್ ಡಿಕ್ಕಿ ಆದಾಗ ನೋವು ತಡೆಯಲಾರದೆ ಗಾಯಾಳು ಕಿರುಚಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಅಪಘಾತ ಆದ ನಂತರ ಟ್ಯಾಕ್ಸಿಯಲ್ಲಿ ಹೆಬ್ಬಾಳ ಬಳಿಯ ಖಾಸಗಿ ಆಸ್ಪತ್ರೆಗೆ ವೇಣುಗೋಪಾಲ್ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬೈಕ್‌ನವರೇ ಸ್ಪೀಡ್ ಆಗಿ ಬಂದರು ಎಂದು ರಕ್ಷಕ್ ಅವರು ಹೇಳುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವೇಣುಗೋಪಾಲ್ ತಂದೆ ಪ್ರಕಾಶ್ ಹೇಳಿಕೆ ನೀಡಿದ್ದಾರೆ. ‘ನಿನ್ನೆ ಮಧ್ಯಾಹ್ನ 2 ಗಂಟೆಯಲ್ಲಿ ಅಪಘಾತದ ವಿಚಾರ ಗೊತ್ತಾಯ್ತು. ಯಾರು ಮಾಡಿದ್ದಾರೆ ಅಂತ ಕೇಳಿದಾಗ ರಕ್ಷಕ್ ಎಂಬುದು ತಿಳಿಯಿತು. ಬೇರೆ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ರು. ಕೊಟೇಷನ್ ಹಾಕುವಾಗ ಖರ್ಚು ಎಷ್ಟಾದ್ರು ನೋಡ್ಕೊತಿನಿ ಅಂದಿದ್ರು. ಆದರೆ ಮತ್ತೆ ಅವರು ಸೆಟಲ್​ಮೆಂಟ್​ಗೆ ಬಂದಿಲ್ಲ. ಮಗನಿಗೆ ಬೆರಳು, ಕಾಲು ಮೂಳೆ ಮುರಿದಿದೆ. ಸದ್ಯಕ್ಕೆ ಜೀವಕ್ಕೆ ಯಾವುದೇ ಅಪಾಯವಿಲ್ಲ ಅಂತ ವೈದ್ಯರು ಹೇಳಿದ್ದಾರೆ. ಅಷ್ಟು ಹಣ ಕೊಡೋಕೆ‌ ಆಗೋದಿಲ್ಲ ಅಂತ ರಕ್ಷಕ್ ಹೇಳಿದ್ರು. ಅದಕ್ಕೆ ಈಗ ಪೊಲೀಸರಿಗೆ ದೂರು‌ ನೀಡಿದ್ದೇವೆ’ ಎಂದು ವೇಣುಗೋಪಾಲ್ ತಂದೆ ಪ್ರಕಾಶ್ ಹೇಳಿದ್ದಾರೆ.

ಯುವತಿಯ ಸಹೋದರ ಪವನ್ ಸಹ ಈ ಬಗ್ಗೆ ಮಾತನಾಡಿದ್ದಾರೆ. ‘ಆಸ್ಪತ್ರೆಗೆ ಹೋಗಿ ನೋಡಿದಾಗ ಚಿಕಿತ್ಸೆ ಕೊಡ್ತಿದ್ರು. ನಂತರ ರಕ್ಷಕ್ ಬುಲೆಟ್ ಅವರ ಕಾರು ಅಂತ ಗೊತ್ತಾಗಿದೆ. ನನ್ನ ತಂಗಿಗೂ ಸಣ್ಣಪುಟ್ಟ ಗಾಯ ಆಗಿದೆ. ಹಂಪ್ಸ್ ನೋಡಿಕೊಳ್ಳದೇ ಸ್ಪೀಡ್ ಆಗಿ ಬಂದು ಆಕ್ಸಿಡೆಂಟ್ ಮಾಡಿದ್ದಾರೆ. ಅಪಘಾತದ ನಂತರ ಅವರೇ ಆಸ್ಪತ್ರೆಗೆ ಸೇರಿಸಿದ್ದಾರೆ. ನಿನ್ನೆ ಬಂದಿದ್ರು, ಮತ್ತೆ ಇವತ್ತು ಬಂದಿಲ್ಲ’ ಎಂದು ಅವರು ಹೇಳಿದ್ದಾರೆ.

- Advertisement -

Latest News

error: Content is protected !!