ಮೂಡುಬಿದಿರೆ: ದೀಪವು ತನ್ನ ಬೆಳಕಿನಿಂದ ಕತ್ತಲೆಯನ್ನು ಹೋಗಲಾಡಿಸುವಂತೆಯೇ, ಶಿಕ್ಷಕರು ಸಹ ಜ್ಞಾನ, ಮೌಲ್ಯಗಳು ಮತ್ತು ವಿಚಾರಗಳ ಬೆಳಕನ್ನು ಹರಡುವ ಮೂಲಕ ಸಮಾಜವನ್ನು ಬೆಳಗಿಸುತ್ತಾರೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಮೂಡಬಿದಿರೆಯಲ್ಲಿ ಇಂದು ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಪ್ರೇರಣಾ ದಿವಸ ಹಾಗೂ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಅತ್ಯುತ್ತಮ ಶಿಕ್ಷಕರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ ಮತ್ತು ಶಿಕ್ಷಣ ಕ್ಷೇತ್ರದ ಗಣ್ಯ ವ್ಯಕ್ತಿಗಳಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಮತ್ತು ಪ್ರೇರಣಾ ದಿವಸ್ ಸ್ವಾಗತ ಸಮಿತಿಯ ಅಧ್ಯಕ್ಷ ವಿವೇಕ್ ಎಂ. ಆಳ್ವ ಉಪಸ್ಥಿತರಿದ್ದರು.


