ಮಂಗಳೂರು; ಕಾಂತಾರ ಚಾಪ್ಟರ್ 1 ಗೆ ಪದೇ ಪದೇ ವಿಘ್ನ ಎದುರಾಗುತ್ತಿದ್ದು ಇದೀಗ ದೈವದ ಮುಂದೆ ರಿಷಭ್ ಶೆಟ್ಟಿ ಕಷ್ಟ ಹೇಳಿಕೊಂಡಿದ್ದಾರೆ.
ಮಂಗಳೂರಿನ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ಉತ್ಸವದಲ್ಲಿ ರಿಷಭ್ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಗ, ಮಗಳೊಂದಿಗೆ ಭಾಗಿ ಆಗಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಹೆಂಡತಿ ಮಕ್ಕಳೊಂದಿಗೆ ಆಗಮಿಸಿದ ರಿಷಭ್ ಶೆಟ್ಟಿ ರಾತ್ರಿಯಿಂದ ಬೆಳಿಗ್ಗೆಯವರೆಗೂ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ವಾರಾಹಿ ಪಂಜುರ್ಲಿ ದೈವದ ಬಳಿ ನಟ ಕಷ್ಟ ಹೇಳಿಕೊಂಡಿದ್ದಾರೆ. ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವದ ಅಭಯ ಸಿಕ್ಕಿದೆ. ‘ನಿನಗೆ ದುಶ್ಮನ್ಗಳಿದ್ದಾರೆ, ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಸಂಚು ನಡೆದಿದೆ. ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ, ನಂಬಿದ ದೈವ ಕೈಬಿಡಲ್ಲ. ಯಾರು ನಿನಗೆ ಕೇಡು ಬಗೆದಿದ್ದಾರೆಂದು ಈಗ ಹೇಳಲ್ಲ, ನೋಡಿಕೊಳ್ತೇನೆ. ‘ನನಗೆ ಸೇವೆ ನೀಡುವ ಹರಕೆ ಹೇಳಿಕೋ, ಐದು ತಿಂಗಳ ಗಡುವಲ್ಲಿ ಒಳ್ಳೆದು ಮಾಡುತ್ತೇನೆ’ಎಂದು ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವ ಅಭಯ ನೀಡಿದೆ.


