ಮಂಗಳೂರು: ಸೆ. 14ರಿಂದ ಅ. 2ರ ವರೆಗೆ ಜಿಲ್ಲೆಯಾದ್ಯಂತ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆ, ಅಂಗನವಾಡಿ ಕೇಂದ್ರ, ಸರಕಾರಿ ಕಟ್ಟಡ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯವನ್ನು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂಘದವರು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿ ಹಾಗೂ ಸಿಬಂದಿ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆನಂದ್ ಕೆ. ಸೂಚಿಸಿದರು.
“ಸ್ವಚ್ಛತಾ ಹಿ ಸೇವಾ’ ಆಂದೋಲನವನ್ನು ಆಯೋಜಿಸುವ ಕುರಿತು ಜರಗಿದ ಆನ್ ಲೈನ್ ಸಭೆಯಲ್ಲಿ ಮಾತನಾಡಿ, ‘ಸ್ವಚ್ಛತಾ ಹಿ ಸೇವಾ ಆಂದೋಲನವನ್ನು ಪ್ರತಿವರ್ಷ ಕೇಂದ್ರ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ವಸತಿ ವ್ಯವಹಾರಗಳ ಸಚಿವಾಲಯ ಪ್ರತಿ ಗ್ರಾಮಗಳಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ “ಸ್ವಚ್ಛತಾ ಹಿ ಸೇವಾ’’ ಆಂದೋಲ ನವನ್ನು ಆಯೋಜಿಸಲಾಗುತ್ತಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಶಿಕ್ಷಣ ಸಂಸ್ಥೆ ಹಾಗೂ ಎನ್‌ಜಿಒ ಅವರೊಂದಿಗೆ ಸೇರಿಕೊಂಡು ಒಂದು ತಂಡ ರಚಿಸಿ ಶ್ರಮದಾನ ಚಟುವಟಿಕೆಗಳನ್ನು ನಿಯಮಿತವಾಗಿ ಪ್ರಾರಂಭಿಸಬೇಕು. ಶ್ರಮದಾನ ವಾರದಲ್ಲಿ ಒಂದು ದಿನ ತಪ್ಪದೇ ಮಾಡುವಂತೆ ನೋಡಿಕೊಳ್ಳಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಸ ಕಂಡು ಬರಬಾರದು. ಸ್ಥಳೀಯವಾಗಿ ಶ್ರಮದಾನ ಚಟುವಟಿಕೆ ಮಾಡಬೇಕು ಎಂದು ಎಲ್ಲ ತಾಲೂಕು ಪಂಚಾಯತ್‌ಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು.
ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಕೇಂದ್ರಗಳ ಸುತ್ತಮುತ್ತ ಶ್ರಮದಾನ ಆಯೋಜಿಸುವುದು. ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರಿನಿಂದ ಆರೋಗ್ಯದ ಕುರಿತು ಅರಿವು ಮೂಡಿಸುವ ಪೋಸ್ಟರ್, ಕಿರು ಚಿತ್ರಗಳನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು.


