Saturday, June 6, 2026
Homeಕರಾವಳಿಮಂಗಳೂರುಮಂಗಳೂರು; ಖೋಟಾನೋಟು ಪ್ರಿಂಟ್ ಮಾಡಿ ಚಲಾವಣೆಗೆ ಯತ್ನಿಸಿದ ನಾಲ್ವರ ಬಂಧನ

ಮಂಗಳೂರು; ಖೋಟಾನೋಟು ಪ್ರಿಂಟ್ ಮಾಡಿ ಚಲಾವಣೆಗೆ ಯತ್ನಿಸಿದ ನಾಲ್ವರ ಬಂಧನ

- Advertisement -
- Advertisement -

ಮಂಗಳೂರು; ಯೂಟ್ಯೂಬ್ ನೋಡಿ ಖೋಟಾನೋಟು ತಯಾರಿಕೆ ಕಲಿತು ಅದನ್ನು ಪ್ರಿಂಟ್ ಮಾಡಿ ಚಲಾವಣೆಗೆ ಯತ್ನಿಸಿದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕಾಸರಗೋಡು ಜಿಲ್ಲೆಯ ಕೊಳತ್ತೂರಿನ ವಿ.ಪ್ರಿಯೇಶ್ (38), ಮಲ್ಲ ಗ್ರಾಮದ ‌ಮುಳಿಯಾರಿನ ವಿನೋದ್ ಕುಮಾರ್‌ ಕೆ. (33), ಪೆರಿಯದ ಕುನಿಯಾ ವಡಂಕುಂಕರದ ಅಬ್ದುಲ್ ಖಾದರ್ ಎಸ್.ಎ (58) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಬೆಳಿಯೂರು ಕಟ್ಟೆಯ ಆಯೂಬ್ ಖಾನ್‌ (51) ಬಂಧಿತರು.

ಆರೋಪಿಗಳಿಂದ ಸುಮಾರು 2.13 ಲಕ್ಷ  ಮೌಲ್ಯದ 427 ಖೋಟಾನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಈಗಾಗಲೇ ಖೋಟಾ ನೋಟು ಚಲಾವಣೆ ಮಾಡಿದ್ದರೇ ಎಂಬುದು ಸಮಗ್ರ ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪ್ರಿಯೇಶ್ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ಮುದ್ರಣಾಲಯವನ್ನು ಹೊಂದಿದ್ದು, ಅಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದ. ಅದಕ್ಕೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ಕೇರಳದ ಕೋಯಿಕ್ಕೋಡ್‌ ಮತ್ತು ದೆಹಲಿಯಿಂದ ಖರೀದಿಸಿದ್ದ. ಸಾಲದ ಸುಳಿಗೆ ಸಿಲುಕಿದ್ದ ಆತ ಖೋಟಾ ನೋಟುಗಳನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದ. ಸುಲಭದಲ್ಲಿ ಹಣ ಸಂಪಾದಿಸುವ ಉದ್ದೇಶದಿಂದ ನಾಲ್ಕು ತಿಂಗಳಿನಿಂದ ಈ ಕೃತ್ಯದಲ್ಲಿ ತೊಡಗಿದ್ದ. ಆತನಿಗೆ ವಿನೋದ್‌ ಪರಿಚಯವಿತ್ತು. ವಿನೋದ್‌ ಮೂಲಕ ಅಬ್ದುಲ್ ಖಾದರ್‌ ಹಾಗೂ ಆತನ ಮೂಲಕ ಆಯೂಬ್ ಖಾನ್‌ ಪರಿಚಯವಾಗಿದ್ದರು. ಆರೋಪಿಗಳು ಖೋಟಾ ನೋಟುಗಳನ್ನು ಪ್ರಿಯೇಶ್‌ನಿಂದ ತರಿಸಿಕೊಂಡು ನಗರದಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದರು. ಪ್ರಿಯೇಶ್‌ ₹ 25 ಸಾವಿರ ಪಡೆದು, ಪ್ರತಿಯಾಗಿ ₹ 500 ಮುಖ ಬೆಲೆಯ ಖೋಟಾ ನೋಟು ( ₹ 1 ಲಕ್ಷ ) ನೀಡಲು ಒಪ್ಪಿದ್ದ. ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ.

- Advertisement -

Latest News

error: Content is protected !!