ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಎಫ್ ಎಸ್ ಎಲ್ ವರದಿಗಳು ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ರೇಣುಕಾಸ್ವಾಮಿ ಕೊಲೆಗೆ ಸಂಬಂಧಪಟ್ಟಂತೆ ಸಿಸಿಟಿವಿ, ಬ್ಲಡ್ ರಿಪೋರ್ಟ್ ಕುರಿತ ಎಫ್ ಎಸ್ ಎಲ್ ನ ಆರು ವರದಿಗಳು ಪೊಲೀಸರಿಗೆ ಇ-ಮೇಲ್ ಮೂಲಕ ಬಂದಿದ್ದು, ಹತ್ಯೆ ಪ್ರಕರಣಕ್ಕೆ ಮತ್ತಷ್ಟು ಮಹತ್ವದ ಸಾಕ್ಷಿಗಳು ಲಭ್ಯವಾದಂತಾಗಿದೆ.
ರೇಣುಕಾಸ್ವಾಮಿಯ ಪೋಸ್ಟ್ ಮಾರ್ಟಂ ಪರೀಕ್ಷೆಯ ಸ್ಯಾಂಪಲ್ಸ್ ಎಫ್ಎಸ್ಎಲ್ ವರದಿಯಲ್ಲಿ ಎದೆಯ ಎಲುಬು ಮುರಿದು, ಶ್ವಾಸಕೋಶಕ್ಕೆ ಮೂಳೆ ಚುಚ್ಚಿದ್ದು ಇದರಿಂದಲೇ ಕೊಲೆಯಾಗಿರೋದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ಇನ್ನು ರೇಣುಕಾಸ್ವಾಮಿ ಮೊಣಕಾಲು ಮೂಳೆ ಮುರಿದು, ಬಲಗಣ್ಣಿಗೂ ಗಾಯವಾಗಿದೆ. ಆರಕ್ಕೂ ಹೆಚ್ಚು ಆರೋಪಿಗಳ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ.
ಇಂದು ಎಫ್ ಎಸ್ ಎಲ್ ವರದಿ ಬಂದ ಹಿನ್ನೆಲೆಯಲ್ಲಿ ಕಮಿಷನರ್ ದಯಾನಂದ್ ಅವರು, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖಾಧಿಕಾರಿಗಳು, ಹಿರಿಯ ಅಧಿಕಾರಿಗಳ ಜೊತೆಗೆ ಎಫ್ ಎಸ್ ಎಲ್ ವರದಿ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಕಾನೂನಿನ ಮೊರೆ ಹೋಗಲು ಪೊಲೀಸರು ನಿರ್ಧರಿಸಿದ್ದಾರೆ.


