ಬೆಳ್ತಂಗಡಿ: ಕೌಟುಂಬಿಕ ಕಲಹದಿಂದಾಗಿ ಪತ್ನಿಗೆ ಪತಿ ಚೂರಿಯಿಂದ ಇರಿದ ಘಟನೆ ಬೆಳ್ತಂಗಡಿ ಗ್ರಾಮದ ಕಣಿಯಾರು ಗ್ರಾಮದ ಜೋರುಕಟ್ಟೆ ಎಂಬಲ್ಲಿ ನಡೆದಿದೆ.ಜೋರುಕಟ್ಟೆ ನಿವಾಸಿ ಮೊಹಮ್ಮದ್ ಎಂಬವರ ಪುತ್ರಿ ಸಜರಾ (40) ಇರಿತಕ್ಕೆ ಒಳಗಾದ ಮಹಿಳೆ.
ಮಡಂತ್ಯಾರು ಸಮೀಪದ ಕೊಲತ್ತಬೈಲು ಮಾಲಾಡಿ ನಿವಾಸಿ ಹಕೀಂ ಚೂಕುವಿನಿಂದ ಇರಿದ ಪತಿ. ಹಕೀಂ ಅವರನ್ನು ಸಜರಾ 15 ವರ್ಷಗಳ ಹಿಂದೆ ವಿವಾಹವಾಗಿದ್ದರು. ವಿವಾಹವಾದ ಕೆಲ ವರ್ಷಗಳ ಬಳಿಕ ಹಕೀಂ ಸಜರಾ ಅವರಿಗೆ ಚಿತ್ರಹಿಂಸೆ ನೀಡಲು ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಸಜರಾ ಅವರು ಕಳೆದ ಮೂರು ವರ್ಷಗಳಿಂದ ಜೋರುಕಟ್ಟೆಯಲ್ಲಿರುವ ತನ್ನ ತವರು ಮನೆಗೆ ಬಂದು ಮಕ್ಕಳೊಂದಿಗೆ ನೆಲೆಸಿದ್ದರು. ಶುಕ್ರವಾರ ಮಧ್ಯಾಹ್ನ ವೇಳೆ ಚೂರಿ ಹಿಡಿದುಕೊಂಡು ಬಂದಿದ್ದ ಹಕೀಂ ಏಕಾಏಕಿಯಾಗಿ ಸಜರಾ ಅವರ ಮೇಲೆ ಹಲ್ಲೆ ನಡೆಸಿ, ತಡೆಯಲು ಬಂದ ತಂದೆ ಮಹಮ್ಮದ್ ಅವರ ಮೇಲೆಯೂ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿರುವುದಾಗಿ ಆರೋಪಿಸಲಾಗಿದೆ.
ಹಲ್ಲೆ ನಡೆಸಿ ಪರಾರಿಯಾದ ಹಕೀಂನನ್ನು ಮನೆಮಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉಪ್ಪಿನಂಗಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡೂ ಕೈ, ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ಗಾಯಗಳಾಗಿರುವ ಸಜರಾ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


