ಮಂಗಳೂರು: ಬೋಳಿಯಾರಿನಲ್ಲಿ ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಎಸ್ ಡಿಪಿಐ ಪ್ರತಿಭಟನೆ ನಡೆಸಿದೆ.
ಪ್ರಕರಣದಲ್ಲಿ ಸಂಬಂಧ ಅಮಾಯಕ ಯುವಕರನ್ನು ಬಂಧಿಸುತ್ತಿರುವ ಆರೋಪದಡಿ ಕೊಣಾಜೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಯಿತು.
ಬೋಳಿಯಾರು ಘಟನೆಯ ಹೆಸರಿನಲ್ಲಿ ಮಂಗಳೂರು ನಗರ ಪೊಲೀಸರು ಮತ್ತು ರಾಜ್ಯ ಸರ್ಕಾರ ಮುಸ್ಲಿಂ ಯುವಕರನ್ನು ಬೇಟೆಯಾಡುತ್ತಿರುವುದಾಗಿ ಬ್ಯಾನರ್ ಹಿಡಿದು ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಎಸ್ ಡಿಪಿಐ ಕಾರ್ಯಕರ್ತರು ಭಾಗಿಯಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮಳೆ ಬಂದರೂ ಪ್ರತಿಭಟನೆ ಮೊಟಕುಗೊಳಿಸದ ಕಾರಣ ಮಂಗಳೂರು ದಕ್ಷಿಣ ಎಸಿಪಿ ಧನ್ಯ ನಾಯಕ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.ಪ್ರತಿಭಟನಾಕಾರರು ಪೊಲೀಸ್ ಠಾಣೆಯ ಒಳಗೆ ಪ್ರವೇಶಿಸದಂತೆ ಪ್ರವೇಶ ದ್ವಾರದ ಬಳಿ ಬ್ಯಾರಿಕೇಡ್ ಅಳವಡಿಸಲಾಗಿತ್ತು.
ಜೂನ್ 9 ರಂದು ಬಂಟ್ವಾಳ ತಾಲೂಕಿನ ಬೋಳಿಯಾರಿನಲ್ಲಿ ನಡೆದಿದ್ದ ಚೂರಿ ಇರಿತ ಪ್ರಕರಣದಲ್ಲಿ ಕೊಣಾಜೆ ಪೊಲೀಸರು ಈ ವರೆಗೆ 15 ಆರೋಪಿಗಳನ್ನು ಬಂಧಿಸಿದ್ದಾರೆ.


